ಚಿಕ್ಕಮಗಳೂರು: ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಚಿಕ್ಕಮಗಳುರು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಪ್ರಕರಣ ಹೆಚ್ಚುತ್ತಿದ್ದು, ಇನ್ನೊಂದೆಡೆ ಪ್ರವಾಹ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾಂಬ ದೇವಾಲಯದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಶೃಂಗೇರಿಯಲ್ಲಿ ಒಂದೆಡೆ ಗುಡ್ಡ ಕುಸಿತ ಸಂಭವಿಸುತ್ತಿದ್ದರೆ ಮತ್ತೊಂದೆಡೆ ಪ್ರವಾಹ ಭೀತಿ ಶುರುವಾಗಿದೆ. ಶೃಂಗೇರಿ ಶಾರದಾಂಬ ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ನೆರೆ ಆತಂಕ ಹೆಚ್ಚಾಗಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶಾರದಾಂಬ ದೇವಾಲಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಶೃಂಗೇರಿ ದೇವಾಲಯದ ಗಾಂಧಿ ಮೈದಾನ, ಪ್ಯಾರಲ್ ರೋಡ್, ಪಾರ್ಕಿಂಗ್ ಸ್ಥಳಗಳಲ್ಲಿ ನಿಷೇಧ ಹೇರಲಾಗಿದೆ. ಸ್ಥಳಿಯರು, ಪ್ರವಾಸಿಗರು ಹಾಗೂ ವಾಹನ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಸೂಚಿಸಲಾಗಿದೆ.
ಇನ್ನು ಶೃಂಗೇರಿ ಪಟ್ಟಣದ ಬಳಿ ಗೋರಿ ಗುಡ್ಡ ಕುಸಿತವಾಗಿದೆ. ಗುಡ್ಡದ ಮೇಲಿರುವ ಹಜರತ್ ಮೆಹಬೂಬ್ ಝಹೂರ್ ಷಾಹ ದರ್ಗಾದ ಕೆಳ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ದರ್ಗಾ ಕುಸಿದು ಮನೆಗಳ ಮೇಲೆ ಬೀಳುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಲವೆಡೆ ಗುಡ್ಡ ಕುಸಿತ, ಭೂ ಕುಸಿತ ಸಂಭವಿಸುತ್ತಿದೆ.