ಚಿಕ್ಕಮಗಳೂರು: ಇಂದು ದತ್ತಜಯಂತಿ ಕೊನೆ ದಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದತ್ತ ಪೀಠಕ್ಕೆ ದತ್ತಮಾಲಾಧಾರಿಗಳು ಹರಿದು ಬರುತ್ತಿದ್ದಾರೆ. ಈ ನಡುವೆ ನಾಗೇನಹಳ್ಳಿ ದರ್ಗಾದಲ್ಲಿಯೂ ದತ್ತ ಜಯಂತಿಗೆ ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಚಿಕ್ಕಮಗಳೂರಿನ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ನಡೆಸುವುದಾಗಿ ಶ್ರೀರಾಮಸೇನೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಂಜಿತ್ ಶೆಟ್ಟಿ ಅವರನ್ನು ಬಸವನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮುಂಜಾಗೃತಾ ಕ್ರಮವಾಗಿ ನಾಗೇನಹಳ್ಳಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದರ್ಗಾದ 200 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇನ್ನು ಬಾಬಾಬುಡನ್ ಗಿರಿಯ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಕೊನೆ ದಿನವಾದ ಇಂದು 20 ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ಜಿಲ್ಲೆಯಾದ್ಯಂತ ಭದ್ರತೆಗಾಗಿ 4000 ಪೊಲೀಸರನ್ನು ನಿಯೋಜಿಸಲಾಗಿದೆ.