ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಕೇಸ್ ನಲ್ಲಿ ಬಂಧಿಸಲ್ಪಟ್ಟಿದ್ದ ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಜೈಲಿನಿಂದ ಹೊರಬರುತ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶ್ರೀಕಾಂತ್ ಪೂಜಾರಿ, ನನ್ನ ವಿರುದ್ಧದ ಎಲ್ಲಾ ಕೇಸ್ ಗಳು ಖುಲಾಸೆಯಾಗಿತ್ತು. ಯಾವುದೇ ಕೇಸ್ ಇಲ್ಲದಿದ್ದರೂ ನನ್ನನ್ನು ಬಂಧಿಸಿದ್ದರು. ನನಗೆ ಯಾವುದೇ ಸಮನ್ಸ್ ಜಾರಿ ಮಾಡಿರಲಿಲ್ಲ, ವಾರೆಂಟ್ ಕೊಟ್ಟಿರಲಿಲ್ಲ. ಏಕಾಏಕಿ ಬಂದು ಪೊಲೀಸರು ಕರೆದೊಯ್ದು ಜೈಲಿಗೆ ಕಳುಹಿಸಿದ್ದರು ಎಂದು ಕಿಡಿಕಾರಿದ್ದಾರೆ.
ಶ್ರೀರಾಮನ ದಯೆಯಿಂದ ಈಗ ಬಿಡುಗಡೆಯಾಗಿದ್ದೇನೆ, ಬಿಜೆಪಿ ನಾಯಕರ ಹೋರಾಟದಿಂದ ಬಿಡುಗಡೆಯಾಗಿದ್ದೇನೆ. ರಾಮಜನ್ಮಭೂಮಿಗಾಗಿ ಹೋರಾಡಿ ಜೈಲು ಸೇರಿದ್ದೆ. ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದು, ನಾನು ಅಯೋಧ್ಯೆಗೆ ಹೋಗಿಯೇ ಹೋಗುತ್ತೇನೆ ಎಂದು ಹೇಳಿದ್ದಾರೆ.