ಭಾರತದ ಅತಿ ದೊಡ್ಡ ಸಿಮೆಂಟ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಶ್ರೀ ಸಿಮೆಂಟ್ ಗ್ರೂಪ್ ಕಳೆದ ಹಲವು ದಿನಗಳಿಂದ ಸಲ್ಲದ ಕಾರಣಕ್ಕೆ ಸುದ್ದಿಯಲ್ಲಿದ್ದು, ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ತೆರಿಗೆ ವಂಚನೆ, ನಕಲಿ ದಾಖಲೆ ಪತ್ರ ಸೇರಿದಂತೆ ಹಲವು ಅವ್ಯವಹಾರ ಬಹಿರಂಗವಾಗಿದೆ.
ಶ್ರೀ ಸಿಮೆಂಟ್ ಗ್ರೂಪಿನ ಜೈಪುರ್, ಅಜ್ಮೀರ್, ಚಿತ್ತೂರ್ ಗರ್, ಬೇವರ್ ಮೊದಲಾದ ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ ಈವರೆಗೆ 23,000 ಕೋಟಿ ರೂಪಾಯಿ ತೆರಿಗೆ ವಂಚನೆ ನಡೆಸಿರುವುದು ತಿಳಿದು ಬಂದಿದೆ. ಕೊಲ್ಕೊತದಲ್ಲಿ ಮುಖ್ಯ ಕಚೇರಿ ಹೊಂದಿರುವ ಶ್ರೀ ಸಿಮೆಂಟ್ ಈ ವಾರ ಒಂದರಲ್ಲೇ ಎರಡನೇ ಬಾರಿ ಆದಾಯ ತೆರಿಗೆ ಇಲಾಖೆ ದಾಳಿಗೆ ತುತ್ತಾಗಿದೆ.
ಎನ್ ಡಿ ಟಿವಿ ವರದಿ ಮಾಡಿರುವಂತೆ ಶ್ರೀ ಸಿಮೆಂಟ್ ಗ್ರೂಪ್, ಈವರೆಗೆ ಪ್ರತಿ ವರ್ಷವೂ 1,200 ಕೋಟಿ ರೂಪಾಯಿಗಳಿಂದ 1,400 ಕೋಟಿ ರೂಪಾಯಿವರೆಗೆ ವಂಚನೆ ನಡೆಸಿಕೊಂಡು ಬಂದಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.
ಶ್ರೀ ಸಿಮೆಂಟ್ ಗ್ರೂಪ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸುದ್ದಿ ಬಹಿರಂಗವಾಗುತ್ತಿದ್ದಂತೆ ಕಂಪನಿಯ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ತ್ರೈಮಾಸಿಕದಲ್ಲಿ ಶ್ರೀ ಸಿಮೆಂಟ್ ಗ್ರೂಪ್ ಲಾಭದಲ್ಲೂ ಇಳಿಕೆಯಾಗಿದೆ ಎಂದು ಹೇಳಲಾಗಿದೆ.