ಬೆಂಗಳೂರು: ಇಂದಿನಿಂದ ಶ್ರಾವಣ ಮಾಸ ಆರಂಭವಾಗಿದೆ. ಶ್ರಾವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಳು, ದೇವಾಲಯಗಳಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಇಂದು ಮೊದಲ ಶ್ರಾವಣ ಶನಿವಾರ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಶ್ರಾವಣ ಶನಿವಾರ, ವೀಕೆಂಡ್ ಜೊತೆಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ತುಂಬಿ ತುಳುಕುತ್ತಿದೆ. ಯಾವ ದೇವಸ್ಥಾನ ನೋಡಿದರೂ ಜನವೋ ಜನ.
ಶ್ರಾವಣ ಮಾಸದ ಮೊದಲ ದಿನವಾದ್ದರಿಂದ ರಾಜ್ಯದ ಎಲ್ಲಾ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ನಡೆಯುತ್ತಿದೆ. ನಾಡ ಅದಿದೇವತೆ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ. ಶ್ರೀರಂಗನಾಥ ಸ್ವಾಮಿ ದೇವಾಲಯ, ನಂಜನಗೂಡು ನಂಜುಂಡೇಶ್ವರ, ಚಲುವನಾರಾಯಣ ಸ್ವಾಮಿ ದೇವಾಲಯ, ನಿಮಿಷಾಂಬ, ಮಲೈಮಹದೇಶ್ವರ ಸ್ವಾಮಿ ದೇವಾಲಯಗಳಿಗೆ ಭಕ್ತರು ಸಾಗರೋಪಾದಿಯಲ್ಲಿ ಭೇಟಿ ನೀಡುತ್ತಿದ್ದಾರೆ.
ಇನ್ನು ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಾದ ದೊಡ್ಡ ಗಣಪಿ, ಗಾಳಿ ಆಂಜನೇಯಸ್ವಾಮಿ, ಆರ್ಮುಗಂ, ಬನಶಂಕರಿ, ಕಾಡುಮಲ್ಲೇಶ್ವರ, ಚಿಕ್ಕತಿರುಪತಿ ಸೇರಿದಂತೆ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.