ಬರೂಯಿಪುರ: ದೆಹಲಿಯಲ್ಲಿ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆ ಬೆಳಕಿಗೆ ಬಂದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಅಂಥದ್ದೇ ಘಟನೆ ನಡೆದಿದೆ. ನವೆಂಬರ್ 13 ರಂದು, ವ್ಯಕ್ತಿಯೊಬ್ಬ ಭಾರತೀಯ ನೌಕಾಪಡೆಯ ನಿವೃತ್ತ ಸಿಬ್ಬಂದಿಯಾಗಿದ್ದ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ. ನಂತರ ಆತ ತನ್ನ ತಾಯಿಯ ಸಹಾಯದಿಂದ ಮೃತದೇಹವನ್ನು ಕತ್ತರಿಸಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ಛಿದ್ರಗೊಂಡ ದೇಹದ ಭಾಗಗಳನ್ನು ಅವರ ಪ್ರದೇಶದಲ್ಲಿನ ಕೊಳಗಳು ಮತ್ತು ಪೊದೆಗಳಲ್ಲಿ ಎಸೆಯಲಾಯಿತು. ಪೊಲೀಸರನ್ನು ದಾರಿ ತಪ್ಪಿಸಲು ಇಬ್ಬರೂ ನಾಪತ್ತೆ ದೂರು ದಾಖಲಿಸಿದ್ದಾರೆ.
ವ್ಯಕ್ತಿಯ ಛಿದ್ರಗೊಂಡ ಮುಂಡವು ಬರೂಯಿಪುರದ ಹರಿಹರಪುರ ಸಮೀಪದ ಕೊಳದಲ್ಲಿ ತೇಲುತ್ತಿರುವುದು ಕಂಡು ಬಂದ ನಂತರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆಗ ಕೊಲೆ ರಹಸ್ಯ ಬಯಲಿಗೆ ಬಂದಿದೆ.
ಮೃತದೇಹ ಕೊಳೆತಿದ್ದು, ಪ್ಲಾಸ್ಟಿಕ್ ನಲ್ಲಿ ಸುತ್ತಿ ಹಾಕಲಾಗಿತ್ತು. ಮೃತ ವ್ಯಕ್ತಿಯನ್ನು ಉಜ್ವಲ್ ಚಕ್ರವರ್ತಿ(55) ಎಂದು ಪೊಲೀಸರು ಗುರುತಿಸಿದ್ದಾರೆ, ಅವರು ಬರೂಯಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸ್ ಮಲ್ಲಿಕ್ ನಿವಾಸಿಯಾಗಿದ್ದಾರೆ. ದೇಹದಲ್ಲಿ ಹಲವಾರು ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪೂರ್ಣ ತನಿಖೆ ಮತ್ತು ವಿಚಾರಣೆಯ ನಂತರ, ಪೊಲೀಸರು ಆರೋಪಿಗಳನ್ನು ಅವರ ಪತ್ನಿ ಶ್ಯಾಮಲಿ(48) ಮತ್ತು ಮಗ ಜಾಯ್(25) ಎಂದು ಗುರುತಿಸಿದ್ದಾರೆ. ಪೊಲೀಸರಿಂದ ಗಂಟೆಗಟ್ಟಲೆ ಗ್ರಿಲ್ ಮಾಡಿದ ನಂತರ ತಾಯಿ-ಮಗ ಅಪರಾಧವನ್ನು ಒಪ್ಪಿಕೊಂಡರು. ಹಣದ ವಿವಾದದ ಬಗ್ಗೆ ತೀವ್ರ ಜಗಳದ ನಂತರ ಜಾಯ್ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.