ಕೊರೊನಾ ಲಸಿಕೆಯ ಪ್ರಮಾಣಪತ್ರವು ಸದ್ಯ ಅತ್ಯಂತ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಪ್ರಯಾಣ ಮಾಡುವಾಗ, ಸಿನಿಮಾ ಮಂದಿರಗಳಿಗೆ ಎಂಟ್ರಿ ನೀಡುವಾಗ ಹೀಗೆ ಎಲ್ಲೇ ಹೋಗಬೇಕಾದರೂ ಕೊರೊನಾ ಲಸಿಕೆ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ ಎಂಬಂತಾಗಿದೆ.
ಆದರೆ ತಮಿಳುನಾಡಿನ ಜಿಲ್ಲೆಯೊಂದು ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಮದ್ಯಪಾನ ಕೊಳ್ಳುವವರಿಗೂ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ..!
ತಮಿಳುನಾಡಿದ ನೀಲಗಿರಿ ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ನೀಲಿಗಿರಿಸ್ನಲ್ಲಿ ಹೆಚ್ಚಿನ ಮಂದಿ ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಮದ್ಯಪಾನ ಸೇವಿಸುವವರ ಮೇಲೆ ಲಸಿಕೆಯು ಅಡ್ಡ ಪರಿಣಾಮ ಬೀರುತ್ತದೆ ಎಂಬ ತಪ್ಪು ತಿಳುವಳಿಕೆಯಿಂದಾಗಿ ಹೆಚ್ಚಿನ ಜನರು ಲಸಿಕೆ ಸ್ವೀಕರಿಸಿಲ್ಲ.
ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಲು ಸಾಕಷ್ಟು ಬಾರಿ ಯತ್ನಿಸಿದೆ. ಆದರೂ ಕೂಡ ಜನತೆ ಮಾತ್ರ ಕೊರೊನಾ ಲಸಿಕೆ ಪಡೆಯಲು ಉತ್ಸಾಹ ತೋರಿದಂತೆ ಕಂಡು ಬರಲಿಲ್ಲ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀಲಗಿರಿಸ್ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾ ಲಸಿಕೆ ಪಡೆದವರು ಮಾತ್ರ ಮದ್ಯಪಾನವನ್ನು ಕೊಳ್ಳಲು ಅರ್ಹರು ಎಂದು ಘೋಷಣೆ ಮಾಡಿದ್ದಾರೆ. ಅಂದರೆ ಯಾರೇ ಮದ್ಯ ಕೊಳ್ಳಬೇಕು ಅಂದರೆ ಲಸಿಕೆ ಸ್ವೀಕರಿಸಿದ ಬಗ್ಗೆ ಪ್ರಮಾಣ ಪತ್ರ ತೋರಿಸುವುದು ಇಲ್ಲಿ ಕಡ್ಡಾಯವಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅಧಿಕಾರಿ ದಿವ್ಯಾ, ಜಿಲ್ಲೆಯಲ್ಲಿ 97 ಪ್ರತಿಶತ ಮಂದಿಗೆ ಕೊರೊನಾ ಲಸಿಕೆಯನ್ನು ನೀಡಿದ್ದಾರೆ. ಆದರೆ ಕೆಲವರು ಮಾತ್ರ ನಾವು ಮದ್ಯಪಾನ ಮಾಡುತ್ತೇವೆ. ಕೊರೊನಾ ಲಸಿಕೆ ಸ್ವೀಕರಿಸಿ ಮದ್ಯಪಾನ ಮಾಡುವವರಿಗೆ ಅಡ್ಡ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಲಸಿಕೆ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇಂತವರನ್ನೂ ಲಸಿಕೆ ಅಭಿಯಾನದ ವ್ಯಾಪ್ತಿಗೆ ತರುವ ಸಲುವಾಗಿ ಈ ಪ್ಲಾನ್ ಮಾಡಿದ್ದೇವೆ ಎಂದು ಹೇಳಿದ್ರು.