ಒಮ್ಮೊಮ್ಮೆ ಗಣ್ಯರ ಒಡನಾಟ ಹಾವಿನೊಂದಿಗೆ ಸರಸದಂತೆ, ಇಲ್ಲೊ ಬ್ಬ ಅಧಿಕಾರಿ ಮುಖ್ಯಮಂತ್ರಿಗೆ ಕಳಪೆ ಗುಣಮಟ್ಟದ ಚಹಾ ವ್ಯವಸ್ಥೆ ಮಾಡಿದ್ದಕ್ಕೆ ನಾಡ ದೊರೆಯ ಕೋಪಕ್ಕೆ ತುತ್ತಾಗಿದ್ದಾರೆ.
ಛತ್ತರ್‌ಪುರ ಜಿಲ್ಲೆಯ ಖಜುರಾಹೊ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ “ಕಳಪೆ ಗುಣಮಟ್ಟದ ಚಹಾ” ವ್ಯವಸ್ಥೆ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರಿ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಲಾಗಿದೆ. ಆದರೆ ನೋಟಿಸ್ ವಿಚಾರದಿಂದ ಗದ್ದಲ ಉಂಟಾಗಿ ಅದನ್ನು ಹಿಂತೆಗೆದುಕೊಳ್ಳಲಾಯಿತು.
ಸೋಮವಾರ ವಿಮಾನ ನಿಲ್ದಾಣದಲ್ಲಿ ಸಿಎಂಗೆ ಚಹಾ ಮತ್ತು ಉಪಹಾರದ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ರಾಕೇಶ್ ಕನ್ಹುವಾ ವಹಿಸಿಕೊಂಡಿದ್ದರು. ಕನ್ಹುವಾ ವ್ಯವಸ್ಥೆ ಮಾಡಿದ್ದ ಚಹಾವು ತಣ್ಣಗಿದ್ದು ಕಳಪೆ ಗುಣಮಟ್ಟದ್ದಾಗಿತ್ತು ಎಂದು ಕಂಡುಬಂದಿದೆ.
ನೋಟಿಸ್‌ನ ಪ್ರತಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದರಿಂದ ಮತ್ತು ಟೀಕೆಗೆ ಆಸ್ಪದ ನೀಡಿದ್ದರಿಂದ ಛತ್ತರ್‌ಪುರ ಡಿಸಿ ಸಂದೀಪ್ ನೋಟಿಸ್ ಹಿಂಪಡೆದುಕೊಂಡು, ಸ್ಪಷ್ಟನೆ ನೀಡಿದರು.
ಕನ್ಹುವಾ ಅವರು ಏರ್ಪಡಿಸಿದ್ದ ಚಹಾ ಮತ್ತು ಉಪಹಾರವನ್ನು ಮುಖ್ಯಮಂತ್ರಿಗೆ ನೀಡಲಿಲ್ಲ, ಏಕೆಂದರೆ ಅವರು ವಿಮಾನ ನಿಲ್ದಾಣದಲ್ಲಿ ಇರದೇ, ವಿಮಾನವೇರಿ ಹೊರಟರು ಎಂದು ದ್ವಿವೇದಿ ಹೇಳಿದ್ದಾರೆ
ವಿವಿಐಪಿ ಪ್ರೋಟೋಕಾಲ್ ಬಗ್ಗೆ ಜನರು ಪ್ರಶ್ನೆ ಎತ್ತುವ ಮೂಲಕ ಜಿಲ್ಲಾಡಳಿತಕ್ಕೆ ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿಸಿದರು.
ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಅವರು ಈ ವಿಷಯ ಮುಂದಿಟ್ಟು ಟೀಕಿಸಿದ್ದಾರೆ. “ಜನರಿಗೆ ರೇಷನ್ ಸಿಗದಿರಬಹುದು ಅಥವಾ ಆಂಬ್ಯುಲೆನ್ಸ್ ಪಡೆಯಲು ಸಾಧ್ಯವಾಗದಿರಬಹುದು, ಆದರೆ ಮುಖ್ಯಮಂತ್ರಿಗೆ ತಣ್ಣಗಿನ ಚಹಾ ನೀಡಬಾರದು” ಎಂದು ವ್ಯಂಗ್ಯವಾಡಿದ್ದಾರೆ