ಶಿವಮೊಗ್ಗ: ಕಳೆದ 8 ತಿಂಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆಯಿಂದ ಸುಮಾರು 300 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ.
ಕೊರೋನಾ ಕಾರಣದಿಂದಾಗಿ ಮೊದಲೇ ನೆಲಕಚ್ಚಿದ ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳುವ ಹೊತ್ತಲ್ಲೇ ಕೋಮುಗಲಭೆ, ನಿಷೇಧಾಜ್ಞೆ, ಗಲಾಟೆ, ಜಗಳ ಮೊದಲಾದವುಗಳ ಕಾರಣದಿಂದ ಶಿವಮೊಗ್ಗದಲ್ಲಿ ವ್ಯಾಪಾರಸ್ಥರು ಕಂಗಾಲಾಗಿ ಹೋಗಿದ್ದಾರೆ. ವಿವಿಧ ಉದ್ಯಮಗಳಿಗೆ ದೊಡ್ಡ ಹೊಡೆತವೇ ಬಿದ್ದಿದೆ.
ವ್ಯಾಪಾರ ವಹಿವಾಟು ಹೆಚ್ಚಾಗುವ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ರೀತಿ ಗಲಭೆಗಳಿಂದ ವಹಿವಾಟು ಸ್ಥಗಿತವಾಗಿ ಭಾರಿ ನಷ್ಟವಾಗಿದೆ. ಇತ್ತೀಚೆಗೆ ನಡೆದ ಸಾವರ್ಕರ್ ಫ್ಲೆಕ್ಸ್ ವಿಚಾರ ಹಾಗೂ ಚಾಕು ಇರಿತ ಪ್ರಕರಣದ ನಂತರ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಾಗಿ ಸುಮಾರು 30 ಕೋಟಿ ರೂ. ಗೂ ಅಧಿಕ ನಷ್ಟ ಉಂಟಾಗಿದೆ. ಕಳೆದ 8 ತಿಂಗಳಲ್ಲಿ ಮೂರು ಕೋಮುಗಲಭೆಗಳಿಂದ 300 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗಿದೆ.
ಸದ್ಯ ಶ್ರಾವಣ ಮಾಸವಾಗಿರುವುದರಿಂದ ಹಬ್ಬಗಳು ಶುಭ ಕಾರ್ಯಗಳು ನಡೆಯುತ್ತಿದ್ದು, ಬಟ್ಟೆ, ಚಿನ್ನಾಭರಣ, ಎಲೆಕ್ಟ್ರಾನಿಕ್ ಉಪಕರಣ ಮೊದಲಾದವುಗಳ ವ್ಯಾಪಾರ ವಹಿವಾಟ ಇಲ್ಲದಂತಾಗಿದೆ. ಪ್ರವಾಸಿಗರೂ ಶಿವಮೊಗ್ಗದ ಕಡೆ ತಲೆ ಹಾಕುತ್ತಿಲ್ಲ. ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳಿಗೆ ಭಾರಿ ನಷ್ಟವಾಗಿದೆ.