ರೆಸ್ಯುಮೆ ಅಂದರೆ ವೈಯುಕ್ತಿಕ ಪರಿಚಯ ಪತ್ರ. ಯಾವುದೇ ವ್ಯಕ್ತಿ ನೌಕರಿ ಹುಡುಕಲು ಪ್ರಾರಂಭ ಮಾಡುವಾಗ ಈ ರೆಸ್ಯುಮೆ ಬಹಳ ಮುಖ್ಯವಾಗುತ್ತದೆ. ರೆಸ್ಯುಮೆಯಲ್ಲಿ ನಾವು ದಾಖಲಿಸುವ ಪ್ರತಿಯೊಂದು ವಿಷಯವೂ ನಮಗೆ ಒಳ್ಳೆಯ ನೌಕರಿ ಸಿಗುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.
ರೆಸ್ಯುಮೆಯಲ್ಲಿ ಸಾಮಾನ್ಯವಾಗಿ ವಿದ್ಯಾರ್ಹತೆ ಹಾಗೂ ಕೌಶಲ್ಯ, ವೃತ್ತಿ ಜೀವನದಲ್ಲಿ ನಮಗಿರುವ ಅನುಭವ, ಇವುಗಳನ್ನು ವಿವರವಾಗಿ ಬರೆಯುವುದರ ಕಡೆ ಜನ ಹೆಚ್ಚು ಗಮನ ಹರಿಸುತ್ತಾರೆ. ಆದರೆ ವೈಯುಕ್ತಿಕ ವಿವರ ಎನ್ನುವುದು ಕೇವಲ ಇಷ್ಟಕ್ಕೇ ಸೀಮಿತವಾಗಿ ಇರುವುದಿಲ್ಲ.
ರೆಸ್ಯುಮೆ ನಮ್ಮ ಒಟ್ಟು ವ್ಯಕ್ತಿತ್ವದ ಅಕ್ಷರ ರೂಪ. ಹಾಗಾಗಿ ಇಲ್ಲಿ ತಮ್ಮ ಹವ್ಯಾಸಗಳ ಬಗ್ಗೆ ಬರೆಯುವಾಗ ಸ್ವಲ್ಪ ಗಮನ ಕೊಡುವುದು ಸೂಕ್ತ. ಹವ್ಯಾಸ ಎಂದ ಕೂಡಲೇ ಸಾಮಾನ್ಯವಾಗಿ ಓದುವುದು, ಸಂಗೀತ ಕೇಳುವುದು ಎಂಬ ಸರ್ವೇ ಸಾಮಾನ್ಯ ಸಂಗತಿಯನ್ನು ಎಲ್ಲರೂ ಬರೆಯುತ್ತಾರೆ.
ಆದರೆ ನಿಮಗೆ ನಿಜಕ್ಕೂ ಕಲೆಯ ಬಗ್ಗೆ ಆಸಕ್ತಿ ಇದ್ದರೆ, ಯಾವುದಾದರೂ ಕ್ರೀಡೆಯಲ್ಲಿ ನೀವು ತೊಡಗಿಸಿಕೊಂಡಿರುವಿರಾದರೆ, ಪ್ರವಾಸ ಪ್ರಿಯರಾದರೆ ಇಂತಹವುಗಳನ್ನು ಬರೆಯುವುದು ಸೂಕ್ತ. ಇದರಿಂದ ನೀವು ಅತ್ಯಂತ ಚಟುವಟಿಕೆ ಇಂದ ಕೂಡಿದ ವ್ಯಕ್ತಿತ್ವದವರು, ಜೀವನವನ್ನು ಸಕಾರಾತ್ಮಕವಾಗಿ, ಖುಷಿಯಿಂದ ಎದುರಿಸುವ ಮನೋಭಾವದವರು ಎಂಬ ಅಭಿಪ್ರಾಯ ಮೂಡುತ್ತದೆ.
ಯಾವುದೇ ಕಂಪನಿಯ ಮಾಲೀಕರು ತಮ್ಮಲ್ಲಿ ಕೆಲಸ ಮಾಡುವ ವ್ಯಕ್ತಿ ಹೆಚ್ಚು ಕ್ರಿಯಾಶೀಲರಾಗಿರಬೇಕೆಂದು, ಸೂಕ್ಷ್ಮಗ್ರಾಹಿ ಆಗಿರಬೇಕೆಂದು ನಿರೀಕ್ಷೆ ಮಾಡುವುದು ಸಹಜ. ಇದು ನೀವು ದಾಖಲಿಸುವ ಹವ್ಯಾಸಗಳಲ್ಲಿ ಗೋಚರವಾದರೆ ನಿಮ್ಮನ್ನು ಉತ್ತಮ ಅಭ್ಯರ್ಥಿ ಎಂದು ಪರಿಗಣಿಸುವುದರಲ್ಲಿ ಸಂದೇಹವೇ ಇಲ್ಲ.