ಗುಲಾಬಿ ತುಟಿಗಳು ಯಾರಿಗೆ ಬೇಡ ಹೇಳಿ. ಹೊಳೆಯುವ ಚೆಂದದ ತುಟಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಲಿಪ್ಟ್ಸಿಕ್, ಲಿಪ್ ಬಾಮ್ ಅಂತಾ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನೆಲ್ಲ ಬಳಸ್ತಾರೆ. ಇದು ಕ್ಷಣಿಕ ಮಾತ್ರ. ಈ ಸೌಂದರ್ಯವರ್ಧಕಗಳು ದೀರ್ಘ ಸಮಯದಲ್ಲಿ ತುಟಿಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಮಹಿಳೆ ಇರಲಿ ಪುರುಷ. ಸುಂದರ ತುಟಿ ಅವರು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಅತಿ ಹೆಚ್ಚು ಧೂಮಪಾನದಿಂದಲೂ ತುಟಿ ಕಪ್ಪಾಗುತ್ತದೆ. ಮುಖ ಎಷ್ಟೇ ಸುಂದರವಾಗಿದ್ದರೂ ಕಪ್ಪು ತುಟಿ ಅವರ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿಬಿಡುತ್ತದೆ. ಹಾಗಾಗಿ ತುಟಿಗಳ ಆರೋಗ್ಯ ಕಾಪಾಡಿಕೊಂಡು, ಗುಲಾಬಿ ಬಣ್ಣದ ತುಟಿ ಪಡೆಯುವುದು ಬಹಳ ಮುಖ್ಯ.
ತುಟಿಗಳ ಮೇಲಿರುವ ಡೆಡ್ ಸ್ಕಿನ್ ತುಟಿಯ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಬ್ರೆಷ್ ಮಾಡುವ ವೇಳೆ ತುಟಿಗಳ ಮೇಲೆ ಬೆರಳುಗಳಿಂದ ನಿಧಾನವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಡೆಡ್ ಸ್ಕಿನ್ ಹೋಗಿ, ತುಟಿ ಗುಲಾಬಿ ಬಣ್ಣ ಪಡೆಯುತ್ತದೆ.
ತುಟಿಗಳಿಗೆ ತೇವಾಂಶ ಅಗತ್ಯ. ಶುಷ್ಕ ಹಾಗೂ ಒರಟು ತುಟಿಗಳು ಕಪ್ಪಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾಗಿ ತುಟಿಗಳು ತೇವಾಂಶದಿಂದಿರುವಂತೆ ನೋಡಿಕೊಳ್ಳಿ.
ತುಟಿಗಳನ್ನು ನಾಲಿಗೆಯಿಂದ ಸವರುವ ಅಭ್ಯಾಸ ಅನೇಕರಿಗಿರುತ್ತದೆ. ಹೀಗೆ ಮಾಡುವುದರಿಂದ ತುಟಿಗಳು ಕಪ್ಪಗಾಗುತ್ತವೆ. ತುಟಿಗಳು ಬಣ್ಣ ಕಳೆದುಕೊಳ್ಳುತ್ತವೆ. ಹಾಗಾಗಿ ನಾಲಿಗೆಯಿಂದ ತುಟಿ ಸವರಿಗೊಳ್ಳುವ ಅಭ್ಯಾಸವಿದ್ದರೆ ತಕ್ಷಣ ಬಿಟ್ಟುಬಿಡಿ.
ಸೂರ್ಯನ ಕಿರಣಗಳು ಚರ್ಮವನ್ನು ಕಪ್ಪು ಮಾಡುವುದಲ್ಲದೆ ತುಟಿಗಳ ಮೇಲೂ ಪರಿಣಾಮ ಬೀರುತ್ತದೆ. ತುಟಿಗಳು ಕಪ್ಪಾಗುತ್ತವೆ. ಹಾಗೆ ಒಣಗಿ, ಒರಟಾಗುತ್ತದೆ. ಕೆಲವರ ತುಟಿಗಳು ಬಿರುಕು ಬಿಡುತ್ತವೆ. ಹೊರಗೆ ಹೋಗುವಾಗ ಸನ್ ಬ್ಲಾಕ್ ಹಚ್ಚಿಕೊಳ್ಳುವುದು ಅತ್ಯಗತ್ಯ.