ಕೂದಲಿನ ಆರೈಕೆ ಅತ್ಯಂತ ಅಗತ್ಯ. ಇತ್ತೀಚಿನ ದಿನಗಳಲ್ಲಂತೂ ಕೂದಲು ಉದುರುವಿಕೆಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಸುಂದರ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಂಥದ್ರಲ್ಲಿ ಇರುವ ಕೂದಲನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ದಿನದಲ್ಲಿ ಮಾತ್ರವಲ್ಲ ಮಲಗುವಾಗ ಕೂದಲನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಪ್ರಶ್ನೆಗೆ ಹೆಚ್ಚಿನ ಜನರಿಗೆ ಉತ್ತರ ತಿಳಿದಿಲ್ಲ. ಇದರಿಂದಾಗಿಯೇ ಕೂದಲು ಉದುರುವಿಕೆ ಕೂಡ ಹೆಚ್ಚಾಗುತ್ತದೆ.
ಎಷ್ಟೋ ಜನರು ಮಲಗುವ ಸಂದರ್ಭದಲ್ಲಿ ಕೂದಲನ್ನು ಕಟ್ಟಿಕೊಳ್ಳುವುದಿಲ್ಲ. ಕೂದಲು ಬಿಚ್ಚಿಕೊಂಡು ಮಲಗುವುದು ಆರಾಮದಾಯಕವೆನಿಸುತ್ತದೆ. ಯಾವ ವಿಧಾನವು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ನೋಡೋಣ.
ಮಲಗುವ ಸಂದರ್ಭದಲ್ಲಿ ಕೂದಲನ್ನು ಬಿಚ್ಚಿಕೊಳ್ಳುವುದರಿಂದ ಕೂದಲಿನ ಮೇಲೆ ಯಾವುದೇ ರೀತಿಯ ಒತ್ತಡ ಬೀಳುವುದಿಲ್ಲ. ಇದು ಕೂದಲು ಒಡೆಯುವ ಅಥವಾ ಉದುರುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಆದರೆ ರಾತ್ರಿ ನಿದ್ದೆಯಲ್ಲಿ ಹೊರಳಾಡುವ ಅಭ್ಯಾಸವಿದ್ದರೆ ಕೂದಲು ಸಿಕ್ಕಾಗುವ ಸಾಧ್ಯತೆ ಇರುತ್ತದೆ. ಕೂದಲಿನ ಸಿಕ್ಕು ಬಿಡಿಸುವುದು ಪ್ರಯಾಸದಾಯಕವಾಗಬಹುದು. ಇದರಿಂದ ಸ್ಪ್ಲಿಟ್ ಹೇರ್ಸ್ ಅಪಾಯ ಕೂಡ ಇರುತ್ತದೆ.
ಇನ್ನು ಕೂದಲನ್ನು ಕಟ್ಟಿಕೊಂಡು ಮಲಗುವುದರಿಂದ ಅನುಕೂಲ ಮತ್ತು ಅನಾನುಕೂಲ ಎರಡೂ ಇವೆ. ಮಲಗುವ ಸಂದರ್ಭದಲ್ಲಿ ಕೂದಲನ್ನು ಕಟ್ಟಿಕೊಳ್ಳುವುದರಿಂದ ಅದು ಸಿಕ್ಕಾಗುವುದಿಲ್ಲ. ಬೆಳಗ್ಗೆ ಅದನ್ನು ಬಾಚುವುದು ಸುಲಭವಾಗುತ್ತದೆ. ರಾತ್ರಿಯಿಡೀ ದಿಂಬಿನ ಮೇಲೆ ಉಜ್ಜುವುದು ಕೂಡ ತಪ್ಪುತ್ತದೆ.
ಆದರೆ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟುವುದು ನೆತ್ತಿಯ ಮೇಲೆ ಒತ್ತಡವನ್ನು ಉಂಟುಮಾಡಬಹುದು, ಇದು ಕೂದಲನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ರಬ್ಬರ್ ಬ್ಯಾಂಡ್ಗಳನ್ನು ಬಳಸುವುದರಿಂದ ಕೂದಲು ಒಡೆಯಬಹುದು.
ಉತ್ತಮ ವಿಧಾನ ಯಾವುದು?
ಇದು ನಮ್ಮ ಕೂದಲಿನ ಪ್ರಕಾರ ಮತ್ತು ಅಭ್ಯಾಸವನ್ನು ಅವಲಂಬಿಸಿರುತ್ತದೆ. ಕೂದಲು ಉದ್ದ ಮತ್ತು ದಪ್ಪವಾಗಿದ್ದರೆ ಮಲಗುವ ಮೊದಲು ಸಡಿಲವಾಗಿ ಜಡೆ ಹೆಣೆದುಕೊಳ್ಳುವುದು ಉತ್ತಮ. ಕೂದಲು ತೆಳ್ಳಗೆ ಗಿಡ್ಡವಾಗಿದ್ದರೆ ಬಿಚ್ಚಿಕೊಂಡೇ ಮಲಗಬಹುದು.
ಆದರೆ ಮಲಗುವ ಮುನ್ನ ಒಮ್ಮೆ ಕೂದಲನ್ನು ಬಾಚಿಕೊಳ್ಳಿ. ಒದ್ದೆ ಕೂದಲಿನೊಂದಿಗೆ ಎಂದಿಗೂ ಮಲಗಬೇಡಿ. ಮಲಗಲು ರೇಷ್ಮೆ ಅಥವಾ ಸ್ಯಾಟಿನ್ ದಿಂಬುಗಳನ್ನು ಬಳಸಿ. ಇದು ಕೂದಲು ಒಡೆಯದಂತೆ ರಕ್ಷಿಸುತ್ತದೆ. ರಾತ್ರಿ ಮಲಗುವ ಮೊದಲು ಕೂದಲಿಗೆ ಸ್ವಲ್ಪ ಹೇರ್ ಸೀರಮ್ ಅನ್ನು ಸಹ ಅನ್ವಯಿಸಬಹುದು. ಇದು ಕೂದಲಿಗೆ ತೇವಾಂಶವನ್ನು ನೀಡುತ್ತದೆ ಮತ್ತು ಸಿಕ್ಕಾದಂತೆ ತಡೆಯುತ್ತದೆ.