ಗರ್ಭ ಧರಿಸಿದ ಬಳಿಕ ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತವೆ. ಗರ್ಭವತಿಯಾಗಿದ್ದಾಗ ತೂಕ ಹೆಚ್ಚಳವಾಗೋದು ಸರ್ವೇ ಸಾಮಾನ್ಯ. ಹೀಗಾಗಿ ಅನೇಕರು ಇನ್ನಷ್ಟು ತೂಕ ಹೆಚ್ಚಳವಾಗಬಹುದು ಅಂತಾ ಈ ಸಂದರ್ಭದಲ್ಲಿ ತುಪ್ಪ ಸೇವನೆ ಮಾಡೋದನ್ನ ತ್ಯಜಿಸಿಬಿಡ್ತಾರೆ. ಒಮ್ಮೆ ತೂಕ ಏರಿಕೆಯಾದಲ್ಲಿ ಇಳಿಸೋದು ಕಷ್ಟ ಎಂಬ ಕಾರಣಕ್ಕೆ ಅನೇಕರು ಈ ರೀತಿ ನಿರ್ಧಾರವನ್ನ ಮಾಡಿ ಬಿಡ್ತಾರೆ.
ಆದರೆ ತುಪ್ಪದ ಸೇವನೆಯಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತುಪ್ಪದಲ್ಲಿ ಆರೋಗ್ಯಯುತ ಕೊಬ್ಬಿನ ಅಂಶ ಇರೋದ್ರಿಂದ ಇದು ದೇಹಕ್ಕೆ ಹಾನಿ ಮಾಡದು. ತುಪ್ಪವು ನಿಮ್ಮ ತಿನಿಸಿನ ಸ್ವಾದವನ್ನ ಹೆಚ್ಚಿಸೋದ್ರ ಜೊತೆಗೆ ಭ್ರೂಣದ ಆರೋಗ್ಯವನ್ನೂ ಕಾಪಾಡಲಿದೆ. ತುಪ್ಪವು ದೇಹಕ್ಕೆ ಶಕ್ತಿಯನ್ನ ನೀಡೋದ್ರಿಂದ ನಿಮಗೆ ಸುಸ್ತಾಗದಂತೆ ತಡೆಯಲಿದೆ.
ಗರ್ಭ ಧರಿಸಿದ ಸಂದರ್ಭದಲ್ಲಿ ಅನೇಕರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಾರೆ. ಈ ಕಷ್ಟವನ್ನ ಅನುಭವಿಸುತ್ತಿರೋರಿಗೆ ತುಪ್ಪ ರಾಮಬಾಣವಾಗಿ ಕೆಲಸ ಮಾಡಬಲ್ಲದು. ಸರಿಯಾದ ಮಿತಿಯಲ್ಲಿ ತುಪ್ಪ ಸೇವನೆ ಮಾಡೋದ್ರಿಂದ ಮಗುವಿನ ಮೆದುಳು ಚುರುಕಾಗಲಿದೆ.
ಗರ್ಭಿಣಿಯರು ಪ್ರತಿದಿನ 1 ರಿಂದ 3 ಚಮಚ ತುಪ್ಪವನ್ನ ಸೇವಿಸಬಹುದು. ಆದರೆ ತುಪ್ಪ ಸೇವನೆಯಿಂದ ಯಾವುದಾದರೂ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬ ಭಯ ನಿಮ್ಮಲ್ಲಿದ್ದರೆ ಒಮ್ಮೆ ನಿಮ್ಮ ವೈದ್ಯರ ಬಳಿ ಅಭಿಪ್ರಾಯ ಕೇಳಿ ನೋಡಿ.