ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಕೇಕ್ ಗೆ ನಿಗದಿತ ಬೆಲೆಗಿಂತ ಹೆಚ್ಚು ಬೆಲೆ ಕೇಳಿದ ಅಂಗಡಿ ಮಾಲೀಕನ ದುರ್ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಬಾರಿ ಬೆಲೆ ಕೇಳಿದ್ದನ್ನ ಪ್ರಶ್ನಿಸಿದ್ದಕ್ಕೆ ಕೇಕ್ ವಾಪಸ್ ಪಡೆದುಕೊಡು ಅಂಗಡಿಯಾತ ಹಣ ಹಿಂದಿರುಗಿಸಿದ್ದಾನೆ.
ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಗ್ರಾಹಕರು 40 ರೂ. ಬೆಲೆಯ ಕೇಕ್ ಖರೀದಿಸಿದ್ದಾರೆ. ಇದಕ್ಕೆ ಅಂಗಡಿಯಾತ 45 ರೂ. ಕೊಡುವಂತೆ ಕೇಳಿದ್ದಾನೆ.
ನಂತರ ಗ್ರಾಹಕರು ಎಂಆರ್‌ಪಿಗಿಂತ ಏಕೆ ಹೆಚ್ಚು ಶುಲ್ಕ ವಿಧಿಸುತ್ತಿದ್ದೀರ ಎಂದು ಕೇಳಿದರೆ, ಅಂಗಡಿಯಾತ ಯಾವುದೇ ಪ್ರತಿಕ್ರಿಯೆ ನೀಡದೇ, ಬದಲಾಗಿ ಕೇಕ್ ವಾಪಸ್ ತೆಗೆದುಕೊಂಡು ಹಣವನ್ನು ಹಿಂದಿರುಗಿಸಿದ್ದಾನೆ. ಅಷ್ಟೇ ಅಲ್ಲದೇ ಅಂಗಡಿಯವನು ಗ್ರಾಹಕರ ಫೋನ್‌ಗೆ ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಈ ವೀಡಿಯೊವನ್ನು ಜೂನ್ 4 ರಂದು ಹಂಚಿಕೊಳ್ಳಲಾಗಿದ್ದು ಪೋಸ್ಟ್ ಮಾಡಿದ ನಂತರ 10.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಗ್ರಾಹಕನ ಮೇಲೆ ದುರ್ವರ್ತನೆ ತೋರಿದ ಅಂಗಡಿಯವನಿಗೆ ಒಂದು ಸಾವಿರ ರೂಪಾಯಿ ದಂಡ ಹಾಕಿದ್ದು ಕೆಲಸದಿಂದ ತೆಗೆದುಹಾಕಲಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಅನೇಕ ಕಡೆ ಇದೇ ರೀತಿ ಮಾಡುತ್ತಾರೆಂದು ಆಕ್ಷೇಪಿಸಿ ಇಂತವರ ಮೇಲೆ ಸಹಾನುಭೂತಿ ತೋರುವ ಬದಲು ದೂರು ನೀಡಬೇಕೆಂದಿದ್ದಾರೆ.