
ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸೋಮವಾರದಿಂದ ಚಿತ್ರಿಕರಣದಲ್ಲಿ ಪಾಲ್ಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಪ್ರತಿ ವರ್ಷವೂ ಚಲನಚಿತ್ರೋತ್ಸವಕ್ಕೆ ಬರುತ್ತೇನೆ. ಕಳೆದ ವರ್ಷ ಬರಲಾಗಿರಲಿಲ್ಲ. ಇದು ನಮ್ಮ ಮನೆಯ ಹಬ್ಬವಿದ್ದಂತೆ. ನಮ್ಮ ಕನ್ನಡ ಸಿನಿಮಾ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆ ಎನಿಸುತ್ತದೆ. ಈ ಉತ್ಸವದ ರಾಯಭಾರಿ ಕಿಶೋರ್ ನಮ್ಮ ಹಳೆಯ ಮಿತ್ರರಾಗಿದ್ದಾರೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಬಂದಿದ್ದೇನೆ. ಈ ಸಂದರ್ಭದಲ್ಲಿ ನೀವು ತೋರಿಸಿದ ಪ್ರೀತಿ ವಿಶ್ವಾಸವನ್ನು ಮರೆಯುವುದಿಲ್ಲ. ನಿಮ್ಮ ಹಾರೈಕೆ, ಪೂಜೆ, ಪುನಸ್ಕಾರ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಸೋಮವಾರದಿಂದ ಮತ್ತೆ ಶೂಟಿಂಗ್ ಪ್ರಾರಂಭ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಹಾರೈಕೆ ಹಿಂದಿನಂತೆಯೇ ಇರಲಿ ಎಂದು ಹೇಳಿದ್ದಾರೆ.
ನಿಮ್ಮ ಹಾರೈಕೆ ಆಶೀರ್ವಾದ ಇರುವವರೆಗೆ ನನ್ನ ಎನರ್ಜಿ ಕಡಿಮೆಯಾಗುವುದಿಲ್ಲ. ಶಿಸ್ತಿನಿಂದ ಕೆಲಸ ಮಾಡುತ್ತೇನೆ. ಈ ಬಾರಿಯ ಚಿತ್ರ ಚಿತ್ರೋತ್ಸವಕ್ಕೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಥೀಮ್ ಇಟ್ಟಿರುವುದು ಅರ್ಥಪೂರ್ಣವಾಗಿದೆ. ಕರ್ನಾಟಕದಲ್ಲಿ ಯಾವುದೇ ಭಾಷೆ ಯಾವುದೇ ಜನಾಂಗವಾದರೂ ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ, ಪ್ರೀತಿಸುತ್ತೇವೆ ಎಂದು ಶಿವಣ್ಣ ಹೇಳಿದ್ದಾರೆ.