ದೇಶದಲ್ಲಿ ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಆದೇಶಿಸಲಾಗಿದೆ. ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿ ನಾಲ್ಕು ವರ್ಷಗಳೇ ಕಳೆದಿದ್ದರೂ ಸಹ ಈಗಲೂ ಕೂಡ ತ್ರಿವಳಿ ತಲಾಖ್ ಘಟನೆಗಳು ಕೇಳಿ ಬರುತ್ತಲೇ ಇರೋದು ನಿಜಕ್ಕೂ ದುರಂತ.
ಇಂದೋರ್ನ ಶ್ರೀನಗರ ಎಕ್ಸ್ಟೆಂಷನ್ನಲ್ಲಿ ವಾಸವಿರುವ ಮಹಿಳೆಗೆ ಉತ್ತರ ಪ್ರದೇಶದಲ್ಲಿ ವಾಸವಿರುವ ಪತಿಯು ಮೂರು ಬಾರಿ ತಲಾಖ್ ಎಂದು ಹೇಳಿ ವಿವಾಹ ಸಂಬಂಧವನ್ನು ಕಡಿತಗೊಳಿಸಲು ಯತ್ನಿಸಿದ್ದಾನೆ. ಈ ಸಂಬಂಧ ಮಹಿಳೆಯು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ.
ಮೊದಲು ವರದಕ್ಷಿಣೆ ರೂಪದಲ್ಲಿ 5 ಲಕ್ಷ ರೂಪಾಯಿ ತರಬೇಕೆಂದು ಪತಿಯು ಪತ್ನಿಯ ಮೇಲೆ ಲೈಂಗಿಕ ಹಲ್ಲೆ ನಡೆಸುತ್ತಿದ್ದನು. ಇದರಿಂದ ಬೇಸತ್ತಿದ್ದ ಮಹಿಳೆ ತನ್ನ ತವರು ಮನೆಗೆ ತೆರಳಿದ್ದಳು. ಗರ್ಭಿಣಿ ಬೇರೆ ಆಗಿದ್ದ ಪತ್ನಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತನಗೆ ಹೆಣ್ಣು ಮಗು ಜನಿಸಿದೆ ಎಂದು ತಿಳಿದ ಪತಿಯು ಗಂಡು ಮಗು ಬೇಕಿತ್ತು ಎಂದು ಹೇಳಿ ಫೋನ್ ಮೂಲಕವೇ ಮೂರು ಬಾರಿ ತಲಾಖ್ ಎಂದಿದ್ದಾನೆ.
ಈ ಘಟನೆ ಬಳಿಕ ಧೈರ್ಯಗೆಡದ ಮಹಿಳೆಯು ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಮಾತನಾಡಿದ ಎಸ್ಐ ಶಿವಕುಮಾರ್ ಮಿಶ್ರಾ, ಶ್ರೀನಗರ ನಿವಾಸಿಯಾದ ಅಲೀನಾ ತಮ್ಮ ಪತಿ ಮೊಹಮ್ಮದ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. 32 ವರ್ಷದ ಅಲೀನಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ವರದಕ್ಷಿಣೆ ಆರೋಪದ ಅಡಿಯಲ್ಲಿ ಮೈದುನರಾದ ಆರೀಫ್, ಇಸರೈರ್ ಹಾಗೂ ಇಸ್ಮಾಯಿಲ್ ನನಗೆ ಥಳಿಸುತ್ತಿದ್ದರು ಎಂದು ಆರೋಪಿಸಿ ದೂರನ್ನು ನೀಡಿದ್ದಾರೆ ಎಂದು ಹೇಳಿದ್ರು.
ಅಲೀನಾ ನೀಡಿರುವ ಮಾಹಿತಿಯ ಪ್ರಕಾರ ಉತ್ತರ ಪ್ರದೇಶ ಹಾಪುಡ್ ನಿವಾಸಿಯಾದ ಮೊಹಮ್ಮದ್ ಜೊತೆಯಲ್ಲಿ 2009ರ ಜೂನ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ತವರು ಮನೆಯಿಂದ ಏನೂ ತಂದಿಲ್ಲ ಎಂದು ಪತಿ ಗಲಾಟೆ ಆರಂಭಿಸಿದ್ದ. ಪುತ್ರಿ ಜನಿಸಿದ ಬಳಿಕ ನನಗೆ ಗಂಡು ಮಗು ಬೇಕೆಂದು ಹಠ ಹಿಡಿದಿದ್ದ. 2014ರಲ್ಲಿ ಹೆಣ್ಣು ಮಗು ಜನಿಸಿದ ವೇಳೆಯೂ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಇದಾದ ಬಳಿಕ ಇಂದೋರ್ನಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು.
2020ರಲ್ಲಿ ಮತ್ತೆ ಕಲಹ ಉಂಟಾಗಿತ್ತು. ಮನೆ ಬಿಟ್ಟು ತೆರಳಿದ ಆತನನ್ನು ಸಂತೈಸಲು ಸಾಕಷ್ಟು ಯತ್ನಿಸಿ ಕೊನೆಯಲ್ಲಿ ವಿಫಲಳಾಗಿದ್ದೆ. ಈ ಜಗಳ ಒಂದು ವರ್ಷ ಕಳೆದರೂ ಮುಗಿದಿರಲಿಲ್ಲ. ಮದ್ಯಪಾನ ಮಾಡಿದ್ದ ಆತ ಫೋನ್ ಮಾಡಿ ಮೂರು ಬಾರಿ ತಲಾಖ್ ಎಂದು ಹೇಳಿದ್ದಾನೆ. ಇಲ್ಲಿಯವರೆಗೂ ಆತ ಒಂದಲ್ಲ ಒಂದು ದಿನ ಸರಿಯಾಗಬಹುದು ಎಂದೇ ನಂಬಿದ್ದೆ. ಆದರೆ ಇದು ಇನ್ನು ಸರಿಯಾಗುವುದಿಲ್ಲ ಎಂದು ತಿಳಿದು ದೂರು ನೀಡಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.