ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣ ಇಲಾಖೆ ರೂಪಿಸಿರುವ ಪಠ್ಯಕ್ರಮದ ಕರಡಿನಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ನೀಡಲಾಗುತ್ತಿರುವ ಮೊಟ್ಟೆ ವಿತರಣೆ ನಿಲ್ಲಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಮೊಟ್ಟೆ, ಮಾಂಸದಿಂದ ಅನೇಕ ರೋಗಗಳು ಬರುತ್ತವೆ. ಅದಕ್ಕೆ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಠ್ಯಕ್ರಮದ ಕರಡಿನಲ್ಲಿ ಶಿಕ್ಷಣ ಇಲಾಖೆಯಿಂದ ಈ ಬಗ್ಗೆ ಸಲಹೆ ನೀಡಲಾಗಿದೆ. ಶೈಕ್ಷಣಿಕ ವರ್ಷದ ಕೊನೆಯ 10 ದಿನಗಳು ಬ್ಯಾಗ್ ರಹಿತ ದಿನವೆಂದು ಘೋಷಿಸಿ ಆ ದಿನಗಳನ್ನು ಸೇವಾ ದಿನವೆಂದು ಪರಿಗಣಿಸಬೇಕು. ಮಕ್ಕಳನ್ನು ಕುಂಬಾರರು, ಮರಗೆಲಸ, ಕಲಾವಿದರು ವೃತ್ತಿಪರ ಕುಶಲಕರ್ಮಿಗಳ ಬಳಿಗೆ ತರಬೇತಿಗೆ ಕಳುಹಿಸಬೇಕು.
ಶಾಲೆಗಳು ವಿಭಿನ್ನವಾದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಇದರ ಬದಲು ಎಲ್ಲರಿಗೂ ಒಂದೇ ರೀತಿ ಸಮವಸ್ತ್ರ ಇರುವಂತೆ ನೋಡಿಕೊಳ್ಳಬೇಕು. ಖಾದಿಬಳಕೆ ಉತ್ತಮ ಎಂದು ಹೇಳಲಾಗಿದ್ದು, ಶೂ ಹಾಕುವುದರಿಂದ ಮಕ್ಕಳ ಪಾದಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹೇಳಲಾಗಿದೆ. ಹೀಗೆ ಶಿಕ್ಷಣ ಇಲಾಖೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರೂಪಿಸಿದ ಪಠ್ಯಕ್ರಮ ಕರಡಿನಲ್ಲಿ ಹಲವು ಸಲಹೆ ನೀಡಿದೆ ಎನ್ನಲಾಗಿದೆ.