ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಯೊಬ್ಬರು ತಮಗೆ ಡಿಲಿವರಿ ಮಾಡಿದ್ದು ಫ್ರೈಡ್ ಟವೆಲ್ ಎಂದು ತಿಳಿದು ಬೆಚ್ಚಿಬಿದ್ದ ಘಟನೆ ಫಿಲಿಪ್ಪೀನ್ಸ್‌ನಲ್ಲಿ ಜರುಗಿದೆ.
ಅಲಿಕ್ ಪೆರೆಝ್ ಹೆಸರಿನ ಈ ಮಹಿಳೆ ಇಲ್ಲಿನ ಜಾಲಿಬೀ ರೆಸ್ಟೋರಂಟ್‌ನಲ್ಲಿ ಆಹಾರಕ್ಕೆ ಆರ್ಡರ್ ಮಾಡಿದ್ದಾರೆ. ತಮಗೆ ಆರ್ಡರ್ ಡೆಲಿವರಿ ಆದ ಕೂಡಲೇ ಚಿಕನ್ ಅನ್ನು ಕಟ್ ಮಾಡಲು ನೋಡಿದಾಗ ಅವರಿಗೆ ಅಚ್ಚರಿ ಕಾದಿತ್ತು.
“ನನ್ನ ಮಗನಿಗೆ ಚಿಕನ್ ತಿನಿಸಲು ಯತ್ನಿಸಿದಾಗ, ಅದನ್ನು ಕತ್ತರಿಸಲು ಕಷ್ಟವೆಂದು ಕಂಡುಬಂತು. ನನ್ನ ಕೈಗಳಿಂದ ಅದನ್ನು ತೆರೆಯಲು ನೋಡಿದಾಗ ಅದು ಡೀಪ್ ಫ್ರೈ ಆಗಿದ್ದ ಟವೆಲ್ ಎಂದು ತಿಳಿದುಬಂದಿದೆ. ಇದು ನಿಜಕ್ಕೂ ಬೇಸರವಾಗಿಸುತ್ತಿದೆ. ಹಿಟ್ಟಿನಲ್ಲಿ ಟವೆಲ್ ಸಿಕ್ಕಿಕೊಂಡು ಅದನ್ನು ಫ್ರೈ ಮಾಡುವುದೆಂದರೇನು!?!?” ಎಂದಿರುವ ಪೆರೆಝ್, “ಎಲ್ಲದಕ್ಕೂ ಮೊದಲ ಬಾರಿ ಎಂಬುದು ಇರುತ್ತದೆ. ಆದರೆ ಇದು ಭಾರೀ ಕೆಟ್ಟ ಮೊದಲನೆಯದಾಗಿದೆ! ಇದಾದ ಮೇಲೆ ನನ್ನನ್ನು ನಾನು ಸಮಾಧಾನ ಮಾಡಿಕೊಳ್ಳಲು ನೋಡುತ್ತಿದ್ದೇನೆ……ಆದರೆ ಏನಿದು” ಎಂದು ಬರೆದಿದ್ದಾರೆ. ಆ ಟವೆಲ್ ಕಾರಣದಿಂದ ರೆಸ್ಟಾರಂಟ್‌ನಲ್ಲಿ ತಯಾರಿಸಿದ ಬೇರೆಯ ಆಹಾರವೂ ಸಹ ಹಾಳಾಗಿರಬಹುದು ಎಂದು ಪೆರೆಝ್ ಹೇಳಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿದ ಜಾಲಿಬೀ, ತನ್ನ ಆ ಶಾಖೆಯನ್ನು ಮೂರು ದಿನಗಳ ಮಟ್ಟಿಗೆ ಮುಚ್ಚಿ, “ಅಡುಗೆ ಮಾಡುವ ಕ್ರಮಗಳನ್ನು ತನ್ನ ಸ್ಟೋರ್‌ನ ತಂಡ ಪಾಲನೆ ಮಾಡಿದೆಯೇ ಎಂದು ಕೂಲಂಕುಷವಾಗಿ ಪರಿಶೀಲಿಸಲಾಗುವುದು” ಎಂದಿದ್ದು, “ಮತ್ತೊಮ್ಮೆ ಹೀಗೆ ಆಗುವುದಿಲ್ಲ” ಎಂಬ ಭರವಸೆ ನೀಡಿದೆ.