ವಾರಂಗಲ್: ಕೆಲಸದ ಸ್ಥಳದಲ್ಲಿ ಹಿರಿಯ ವೈದ್ಯರೊಬ್ಬರು ಪದೇ ಪದೇ ಕಿರುಕುಳ ನೀಡಿದ್ದರಿಂದ ವಾರಂಗಲ್‌ನ ಕಾಕತೀಯ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರೀತಿ ಎಂಬಾಕೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ತೆಲಂಗಾಣದ ವಾರಂಗಲ್‌ನ MGM ಆಸ್ಪತ್ರೆಯ ಸಿಬ್ಬಂದಿ ಕೊಠಡಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಪ್ರೀತಿ ವಿಷದ ಇಂಜೆಕ್ಷನ್ನಿಂದ ಚುಚ್ಚಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಕಂಡ ತಕ್ಷಣ ಆಕೆಗೆ ಚಿಕಿತ್ಸೆ ನೀಡಲಾಯಿತು. ಆಕೆಯ ಸ್ಥಿತಿ ಹದಗೆಟ್ಟಾಗ ಹೈದರಾಬಾದ್‌ನ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (NIMS) ಸ್ಥಳಾಂತರಿಸಲಾಯಿತು.
ವರದಿಯ ಪ್ರಕಾರ ಪ್ರೀತಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಆಕೆಯ ಹೃದಯ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರೀತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಎರಡನೇ ವರ್ಷದ ವಿದ್ಯಾರ್ಥಿ ಸೈಫ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈಕೆಗೆ ಅಲ್ಲಿನ ಶೌಚಾಲಯವನ್ನೂ ಬಳಸಲು ಕೊಟ್ಟಿಲ್ಲದ ಕಾರಣ ಆಕೆ ನೊಂದುಕೊಂಡಿರುವುದಾಗಿ ತಂದೆ ಹೇಳಿದ್ದಾರೆ.
ತೆಲಂಗಾಣ ರಾಜ್ಯಪಾಲ ಡಾ ತಮಿಳಿಸಾಯಿ ಸೌಂದರರಾಜನ್ ಅವರು ಹೈದರಾಬಾದ್‌ನ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಸ್) ಪ್ರೀತಿಯ ಕುಟುಂಬವನ್ನು ಭೇಟಿ ಮಾಡಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.