ನೋಯ್ಡಾ: ಐಸ್ ಕ್ರೀಂನಲ್ಲಿ ಇತ್ತೀಚೆಗಷ್ಟೇ ಮನುಷ್ಯನ ಬೆರಳು ಪತ್ತೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಐಸ್ ಕ್ರೀಂ ಒಳಗೆ ಶತಪದಿ(ಜರಿ) ಪತ್ತೆಯಾಗಿದೆ.
ಮುಂಬೈನ ಮಲಾಡ್‌ನಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾದ ಆಘಾತಕಾರಿ ಘಟನೆಯ ನಂತರ, ಅಂತಹ ಮತ್ತೊಂದು ಘಟನೆ ಉತ್ತರ ಪ್ರದೇಶದ ನೋಯ್ಡಾದಿಂದ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಫ್ಯಾಮಿಲಿ ಪ್ಯಾಕ್ ಐಸ್‌ಕ್ರೀಮ್ ಅನ್ನು ಆರ್ಡರ್ ಮಾಡಿದ್ದು, ಅದರೊಳಗೆ ಕಂಖಜುರಾ(ಶತಪದಿ) ಕಂಡುಬಂದಿದೆ. ಮಹಿಳೆ ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಪ್ಯಾಕ್ ಒಳಗೆ ಶತಪದಿ ಹೆಪ್ಪುಗಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಮಹಿಳೆಯನ್ನು ದೀಪಾ ಎಂದು ಗುರುತಿಸಲಾಗಿದ್ದು, ನೋಯ್ಡಾದ ಸೆಕ್ಟರ್-12 ನಿವಾಸಿಯಾಗಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಕ್ಕಳು ಮಾವಿನ ಮಿಲ್ಕ್ ಶೇಕ್ ತಯಾರಿಸುವಂತೆ ಒತ್ತಾಯಿಸಿದ್ದರಿಂದ ಐಸ್ ಕ್ರೀಮ್ ಆರ್ಡರ್ ಮಾಡಿರುವುದಾಗಿ ತಿಳಿಸಿದ್ದಾರೆ. ಆನ್‌ಲೈನ್ ಅಪ್ಲಿಕೇಶನ್ ಬ್ಲಿಂಕಿಟ್‌ನಿಂದ 195 ರೂಪಾಯಿ ಮೌಲ್ಯದ ‘ಅಮುಲ್ ವೆನಿಲ್ಲಾ ಮ್ಯಾಜಿಕ್’ ಅನ್ನು ಆರ್ಡರ್ ಮಾಡಿದ್ದಾರೆ. ಐಸ್ ಕ್ರೀಮ್ ಪ್ಯಾಕ್ ತೆರೆದಾಗ, ಅವಳು ಹೆಪ್ಪುಗಟ್ಟಿದ ಶತಪದಿಯನ್ನು ಕಂಡು ಬೆಚ್ಚಿಬಿದ್ದಿರುವುದಾಗಿಯೂ ಹೇಳಿದ್ದಾರೆ.
ಬ್ಲಿಂಕಿಟ್ ಮಹಿಳೆಗೆ 195 ರೂ ಮೊತ್ತವನ್ನು ಹಿಂದಿರುಗಿಸಿದ್ದು, ಅಮುಲ್ ಮ್ಯಾನೇಜರ್ ಅವರನ್ನು ಸಂಪರ್ಕಿಸುತ್ತಾರೆ ಎಂದು ಹೇಳಲಾಗಿದೆ. ಆದರೆ, ಮಹಿಳೆ ಇದನ್ನು ಅಲ್ಲಗಳೆದಿದ್ದು, ತಾನು ಹಣ ಪಡೆದಿಲ್ಲ ಮತ್ತು ಅಮುಲ್ ಕೂಡ ತನ್ನನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.