ಅಮೆರಿಕದ ಶೇ.98ರಷ್ಟು ಪ್ರದೇಶಗಳಲ್ಲಿ ಜನರಿಗೆ ಆಪತ್ಕಾಲದಲ್ಲಿ ನೆರವಾಗಲು ತುರ್ತು ಪರಿಸ್ಥಿತಿ ರಕ್ಷಣಾ ಸಂಖ್ಯೆಯಾಗಿ ‘911’ ಚಾಲನೆಯಲ್ಲಿದೆ. ಈ ಸಂಖ್ಯೆಗೆ ಬರುವ ಪ್ರತಿಯೊಂದು ಕರೆಯನ್ನು ಕೂಡ ತಪ್ಪದೆಯೇ ಸಾರ್ವಜನಿಕ ಸುರಕ್ಷತೆಗೆ ಉತ್ತರಿಸುವ ಕೇಂದ್ರ (ಪಿಎಸ್ಎಪಿ)ಕ್ಕೆ ಎಲ್ಲ ಟೆಲಿಕಾಂ ಕಂಪನಿಗಳು ರವಾನಿಸುವ ಆಧುನಿಕ ವ್ಯವಸ್ಥೆ ಇದೆ.
ಕೇವಲ ಆಪತ್ತಿನಲ್ಲಿ ಸಿಲುಕಿರುವವರು ಮಾತ್ರವೇ ಹೆಚ್ಚಾಗಿ ಈ ಸಂಖ್ಯೆಗೆ ಕರೆ ಮಾಡಿ ಸಹಾಯ ಕೇಳುವುದು ವಾಡಿಕೆ. ಹಾಗಾಗಿ ಈ ಕರೆಗಳನ್ನು ಯಾವುದೇ ಕಾರಣಕ್ಕೂ ಆಪರೇಟರ್ಗಳು ಪೂರ್ಣವಾಗಿ ಉತ್ತರಿಸಿ, ಸಮಾಧಾನಪಡಿಸದೆಯೇ ಕಟ್ ಮಾಡುವುದೇ ಇಲ್ಲ. ಒಂದು ವೇಳೆ ತೀರ ಅಪರೂಪದ ತಾಂತ್ರಿಕ ದೋಷಗಳು ಇದ್ದರೆ ಮಾತ್ರವೇ ಕರೆ ಕಟ್ ಆಗುತ್ತದೆ. ಆಗ ಸಹಾಯಕ ಆಪರೇಟರ್ಗಳು ತಪ್ಪದೆಯೇ ಪುನಃ ಕರೆಯನ್ನು ಮಾಡಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಾರೆ.
ಆದರೆ ಲೂಸಿಯಾನದಲ್ಲಿನ 25 ವರ್ಷದ ಯುವತಿಯೊಬ್ಬಳು ಆಪರೇಟರ್ನ ಮೂಲ ಕರ್ತವ್ಯವನ್ನೇ ಮರೆತು ವರ್ತಿಸಿರುವುದು ದೊಡ್ಡ ದುಷ್ಕೃತ್ಯವಾಗಿದೆ. ಆಕೆಯ ಈ ಅಪರಾಧದ ಗಂಭೀರತೆ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.
ನ್ಯೂ ಆರ್ಲಿಯಾನ್ಸ್ ನಿವಾಸಿ ಪ್ರಿಶಿಯಸ್ ಸ್ಟೀಫನ್ಸ್ ಎಂಬ ಯುವತಿಯೇ ಬೇಜವಾಬ್ದಾರಿ ವರ್ತನೆ ತೋರಿರುವವಳು. ಆಕೆ ಆಪರೇಟರ್ ಆಗಿದ್ದಾಗ 911ಗೆ ತುರ್ತು ಸಹಾಯ ಕೋರಿ ಬರುತ್ತಿದ್ದ ಕರೆಗಳಿಗೆ ಸೂಕ್ತ ಉತ್ತರ ಅಥವಾ ಸಮಜಾಯಿಷಿ ನೀಡದೆಯೇ ಕರೆಗಳನ್ನು ಕಟ್ ಮಾಡಿದ್ದಾಳೆ. ಇದರಿಂದಾಗಿ ಅನೇಕರು ಆಪತ್ತಿನಲ್ಲಿ ಕಷ್ಟ ಅನುಭವಿಸಿ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಹಿಂದೆ ಬಿದ್ದಿರುವುದನ್ನು ಅರಿತ ಸ್ಟೀಫನ್ಸ್ ಪರಾರಿಯಾಗಿದ್ದಾಳೆ. ಆಕೆಗಾಗಿ ಶೋಧಕಾರ್ಯ ತೀವ್ರಗೊಂಡಿದೆ.