ಕೋಯಿಕ್ಕೋಡ್/ ಕೇರಳ : ಬಾಟಲಿಯ ಮುಚ್ಚಳ ಗಂಟಲಿನಲ್ಲಿ ಸಿಲುಕಿ 8 ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ ಕೋಯಿಕ್ಕೋಡ್ ನಲ್ಲಿ ನಡೆದಿದೆ. ಮೃತ ಮಗುವನ್ನು ಮೊಹಮ್ಮದ್ ಇಬಾದ್ ಎಂದು ಗುರುತಿಸಲಾಗಿದೆ.
ಬಾಟಲಿಯ ಕ್ಯಾಪ್ ಸಿಲುಕಿಕೊಂಡ ಕೂಡಲೇ ಮಗುವನ್ನು ಸೋಮವಾರ ರಾತ್ರಿ ಕೊಟ್ಟಪರಂಬು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್ ಮಗು ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟಿದೆ.
ಕೋಯಿಕ್ಕೋಡ್ ನ ಮೊಹಮ್ಮದ್ ಹಾಗೂ ಅಬಿನಾ ಎಂಬ ದಂಪತಿಯ 8 ತಿಂಗಳ ಮಗು ಮನೆಯ ಆವರಣದಲ್ಲಿ ಬಾಟಲಿ ಹಿಡಿದುಕೊಂಡು ಆಟವಾಡುತಿತ್ತು. ಮಗು ಬಾಟಲಿ ಮುಚ್ಚಳ ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿದೆ. ಪರಿಣಾಮ ಮುಚ್ಚಳ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಡಲು ಆಗದೇ ಪ್ರಜ್ಞೆ ತಪ್ಪಿದೆ. ಬಹಳ ಹೊತ್ತು ತಾಯಿಗೆ ಈ ವಿಷಯ ಗೊತ್ತಾಗಲಿಲ್ಲ. ನಂತರ ನೋಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿತ್ತು. ಮಗುವಿನ ಶವದ ಪೋಸ್ಟ್ ಮಾರ್ಟಮ್ ಮಾಡುವಾಗ ಗಂಟಲಿನಲ್ಲಿದ್ದ ಮುಚ್ಚಳವನ್ನು ತೆಗೆಯಲಾಗಿದೆ.