ರಾಜ್ಯ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವಿನ ಸಂಖ್ಯೆಯಲ್ಲೂ ಸಿಲಿಕಾನ್ ಸಿಟಿ, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ಸಂಗತಿ ಈಗ ಬಹಿರಂಗವಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೇ ಗುರುವಾರದಂದು ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
ರಸ್ತೆ ಅಪಘಾತಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವರು, ದೇಶದ ನಗರಗಳ ಪೈಕಿ ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಸಾವುಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭವಿಸುತ್ತಿದ್ದು, ವರ್ಷಕ್ಕೆ 1400 ಪ್ರಕರಣಗಳು ವರದಿಯಾಗಿವೆ. ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, ಇಲ್ಲಿ ಒಂದು ವರ್ಷಕ್ಕೆ 915 ಪ್ರಾಣ ಹಾನಿ ಸಂಭವಿಸಿದ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
ಅಲ್ಲದೆ ತಾವು ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲ್ಗೊಂಡ ವೇಳೆ ರಸ್ತೆ ಅಪಘಾತಗಳ ಕುರಿತು ಚರ್ಚೆ ನಡೆದಾಗ ಭಾರತದಲ್ಲಿ ಸಂಭವಿಸುವ ಅಪಘಾತಗಳ ನೆನೆದು ನನ್ನ ಮುಖ ಮುಚ್ಚಿಕೊಳ್ಳಲು ಯತ್ನಿಸುವೆ ಎಂದೂ ಸಹ ನಿತಿನ್ ಗಡ್ಕರಿ ಮಾರ್ಮಿಕವಾಗಿ ಹೇಳಿದರು. ಅಪಘಾತಗಳ ಸಂಖ್ಯೆ ಕಡಿಮೆ ಮಾಡಬೇಕು ಎಂದರೆ ದೇಶದ ನಾಗರೀಕರ ವರ್ತನೆಯಲ್ಲಿ ಬದಲಾವಣೆಯಾಗಬೇಕು ಎಂದು ಅಭಿಪ್ರಾಯ ಪಟ್ಟ ನಿತಿನ್ ಗಡ್ಕರಿಯವರು, ಕಾನೂನಿಗೆ ಗೌರವ ಕೊಡುವುದನ್ನು ಎಲ್ಲರೂ ಕಲಿಯಬೇಕು ಎಂದು ನುಡಿದರು.