ಮೀನು ಖಾದ್ಯಗಳ ರುಚಿಗೆ ಬಹುತೇಕರು ಮಾರು ಹೋಗುತ್ತಾರೆ. ಸಮುದ್ರದ ಮೀನುಗಳ ಬೆಲೆ ದುಬಾರಿಯಾಗಿರುವ ಕಾರಣ ಸ್ಥಳೀಯ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದರ ಮಧ್ಯೆ ಮೀನು ಖಾದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.
ರಾಜ್ಯದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಕಾರಣಕ್ಕೆ ಜಲಾಶಯಗಳು ಮಾತ್ರವಲ್ಲದೆ ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ನೀರಿಲ್ಲದೆ ಬರಿದಾಗುತ್ತಿವೆ. ಇದರಿಂದಾಗಿ ಸ್ಥಳೀಯ ಮೀನುಗಳ ಉತ್ಪಾದನೆಯಲ್ಲಿ ಭಾರಿ ಇಳಿಕೆಯಾಗಿದ್ದು, ಹೀಗಾಗಿ ಜನವರಿ ವೇಳೆಗೆ ಸ್ಥಳೀಯ ಮೀನುಗಳ ಬೆಲೆ ದುಬಾರಿಯಾಗಲಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಶೇಕಡ 50ರಷ್ಟು ಮೀನು ಉತ್ಪಾದನೆ ಇಳಿಕೆಯಾಗಿದೆ ಎನ್ನಲಾಗಿದ್ದು, ಹೀಗಾಗಿ ಮೀನುಗಳ ಬೆಲೆಯಲ್ಲಿ ಈಗಾಗಲೇ ಶೇಕಡ 40ರಷ್ಟು ಏರಿಕೆ ಕಂಡಿದೆ. ಬಿರು ಬಿಸಿಲು ಹೆಚ್ಚಾಗಿರುವ ಕಾರಣಕ್ಕೆ ಡಿಸೆಂಬರ್ ಅಂತ್ಯದ ವೇಳೆಗೆ ಕೆರೆಕಟ್ಟೆಗಳ ನೀರು ಆವಿಯಾಗುವುದರಿಂದ ಮತ್ತಷ್ಟು ನೀರಿನ ಕೊರತೆ ಉಂಟಾಗುತ್ತದೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮೀನಿನ ಇಳುವರಿ ಇರುವುದಿಲ್ಲ. ಇದರಿಂದ ಸಹಜವಾಗಿಯೇ ಸ್ಥಳೀಯ ಮೀನುಗಳ ಬೆಲೆ ಏರಿಕೆಯಾಗಲಿದೆ.