ಬೆಂಗಳೂರು: ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಬಸ್ ಪ್ರಯಾಣ ದರ ಶೀಘ್ರವೇ ಏರಿಕೆಯಾಗಲಿದ್ದು, ಶೇಕಡ 10 ರಿಂದ 15 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ನಿಗಮಗಳಿಂದ ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ.
ಡೀಸೆಲ್ ದರ ಹೆಚ್ಚಳ, ಬಿಡಿ ಭಾಗಗಳ ದರ ಹೆಚ್ಚಳ, ಸಿಬ್ಬಂದಿ ವೇತನ ಏರಿಕೆ ಸೇರಿ ವರ್ಷದಿಂದ ವರ್ಷಕ್ಕೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಖರ್ಚು ವೆಚ್ಚ ಹೆಚ್ಚಾಗುತ್ತಿದೆ. ಆದಾಯಕ್ಕಿಂತ ಖರ್ಚು ವೆಚ್ಚ ಹೆಚ್ಚಾದ ಪರಿಣಾಮ ನಿಗಮಗಳ ಸಾಲ ಮತ್ತು ಹೊಣೆಗಾರಿಕೆ 4000 ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದೆ.
ಬೇಡಿಕೆಗೆ ಅನುಗುಣವಾಗಿ ಹೊಸ ಬಸ್ ಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು, ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿಲ್ಲ. ಹೀಗಾಗಿ ಪ್ರಯಾಣ ದರ ಹೆಚ್ಚಳಕ್ಕೆ ನಿಗಮಗಳು ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದು, ಪ್ರಸ್ತಾವನೆ ಬಂದರೆ ಪರಿಶೀಲಿಸಲು ಸರ್ಕಾರ ಚಿಂತನೆ ನಡೆಸಿದೆ. 2020ರಲ್ಲಿ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳ ಬಸ್ ಪ್ರಯಾಣದರವನ್ನು ಶೇಕಡ 12ರಷ್ಟು ಹೆಚ್ಚಿಸಲಾಗಿತ್ತು. ಈಗ ಶೇಕಡ 15 ರಷ್ಟರ ವರೆಗೆ ಟಿಕೆಟ್ ನಿಗಮಗಳು ಪ್ರಸ್ತಾವನೆ ಸಲ್ಲಿಸಲಿವೆ ಎಂದು ಹೇಳಲಾಗಿದೆ.