ರಾಮನಗರ: ರವಿಶಂಕರ್ ಗುರೂಜಿ ಆಯುರ್ವೇದಿಕ್ ಫ್ಯಾಕ್ಟರಿಯಲ್ಲಿ ಪ್ರೊಡೆಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಎಸಿಪಿ ವಿರುದ್ಧ ಆರೋಪ ಮಾಡಿ, 13 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈಶ್ವರ್ ಕುಮಾರ್ (49) ಆತ್ಮಹತ್ಯೆಗೆ ಶರಣಾದವರು. ಕಗ್ಗಲಿಪುರದ ಬ್ರಿಗೇಡ್ ಮೆಡೋಸ್ ಅಪಾರ್ಟ್ ಮೆಂಟ್ ನಲ್ಲಿ ಜನವರಿ 20ರಂದು ನೇಣಿಗೆ ಕೊರಳೊಡ್ಡಿದ್ದಾರೆ. ಈಶ್ವರ್ ಆತ್ಮಹತ್ಯೆಗೆ ಜಯನಗರ ಎಸಿಪಿ ಶ್ರೀನಿವಾಸ್ ಹಾಕಿದ್ದ ಬೆದರಿಕೆ ಕಾರಣ ಎಂದು ಮೃತನ ಸಹೋದರ ರೇವಣ ಸಿದ್ದೇಶ್ವರ್ ದೂರು ನೀಡಿದ್ದಾರೆ.
ಈಶ್ವರ್ ಕುಮಾರ್ ಪತ್ನಿ ರಶ್ಮಿ ತನಗೆ ಪತಿ ಕಿರುಕುಳ ನೀಡುತ್ತಿದ್ದು, ಆತನಿಂದ ವಿಚ್ಛೇದನ ಕೊಡಿಸುವಂತೆ ಎಸಿಪಿ ಶ್ರೀನಿವಾಸ್ ಮೊರೆ ಹೋಗಿದ್ದರು. ಹೀಗಾಗಿ ಎಸಿಪಿ ಶ್ರೀನಿವಾಸ್, ಈಶ್ವರ್ ಕುಮಾರ್ ನನ್ನು ಕಚೇರಿಗೆ ಕರೆಸಿ ವಿಚಾರಿಸಿದ್ದರು. ಅದಾದ ಬಳಿಕ ಸೀದಾ ಮನೆಗೆ ವಾಪಸ್ ಆದ ಈಶ್ವರ್ ಕುಮಾರ್ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸಹೋದರನ ಆತ್ಮಹತ್ಯೆಗೆ ಎಸಿಪಿ ಶ್ರೀನಿವಾಸ್ ಬೆದರಿಕೆ, ಪತ್ನಿ ರಶ್ಮಿ, ಆಕೆಯ ತಮ್ಮ ಬಸವರಾಜ್, ತಂಗಿ ರೂಪಾ, ಪಾವಿನ್ ಎಂಬುವವರ ಒತ್ತಡ ಕೂಡ ಕಾರಣ ಎಂದು ಕಗ್ಗಲಿಪುರ ಠಾಣೆಯಲ್ಲಿ ರೇವಣ ಸಿದ್ದೇಶ್ವರ ದೂರು ನೀಡಿದ್ದಾರೆ. ಎಸಿಪಿ ಹೊರತುಪಡಿಸಿ ಉಳಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.