ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ದುಷ್ಕರ್ಮಿಗಳು ಹುಬ್ಬಳ್ಳಿಯ ಹೋಟೇಲ್ ನಲ್ಲಿ ಬರ್ಬರವಾಗಿ ಹತ್ಯೆಗೈದಿದ್ದು, ಚಾಕುವಿನಿಂದ ಮನ ಬಂದಂತೆ ಗುರೂಜಿಯವರನ್ನು ಇರಿದ ಭಯಂಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಚಂದ್ರಶೇಖರ್ ಗುರೂಜಿ ಗ್ರಾಹಕರ ಭೇಟಿಗಾಗಿಯೇ ರೂಮ್ ಬುಕ್ ಮಾಡಿದ್ದರು. ಭಕ್ತರ ಸೋಗಿನಲ್ಲಿ ಗುರೂಜಿ ಭೇಟಿಗೆಂದೇ ಆಗಮಿಸಿದ್ದ ಇಬ್ಬರು ದುಷ್ಕರ್ಮಿಗಳು ಗುರೂಜಿಗಾಗಿ ಅರ್ಧಗಂಟೆ ಕಾದಿದ್ದಾರೆ. ಹೋಟೆಲ್ ರೂಮ್ ನಿಂದ ಹೊರಬಂದ ಗುರೂಜಿ ಹೋಟೆಲ್ ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಓರ್ವ ದುಷ್ಕರ್ಮಿ ಗುರೂಜಿಯವರಿಗೆ ನಮಸ್ಕರಿಸುವ ನೆಪದಲ್ಲಿ ಕಾಲಿಗೆ ಬೀಳುತ್ತಾನೆ. ಇನ್ನೋರ್ವ ದುಷ್ಕರ್ಮಿ ಗುರೂಜಿಯವರಿಗೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ.
ಚಂದ್ರಶೇಖರ್ ಗುರೂಜಿ ನೆಲಕ್ಕೆ ಬಿದ್ದು ನರಳಾಡುತ್ತಿದ್ದರೂ ಬಿಡದ ದುಷ್ಕರ್ಮಿ ಚಾಕುವಿನಿಂದ ಇನ್ನಷ್ಟು ಇರಿದಿದ್ದಾನೆ. 40 ಸೆಂಕೆಂಡ್ ನಲ್ಲಿ 30ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆಗೈದಿದ್ದಾರೆ. ಮಧ್ಯಾಹ್ನ 12:30ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಗುರೂಜಿ ಹತ್ಯೆಗೈದ ಬಳಿಕ ದುಷ್ಕರ್ಮಿಗಳು ಹೋಟೆಲ್ ನಿಂದ ಪರಾರಿಯಾಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.