2020 ರಿಂದ ಈವರೆಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 52,262 ಮಂದಿ ನಾಯಿ ಕಡಿತಕ್ಕೊಳಗಾಗಿದ್ದಾರೆಂಬ ಆಘಾತಕಾರಿ ಮಾಹಿತಿ ಪಾಲಿಕೆಯ ಸರ್ವೆಯಲ್ಲಿ ತಿಳಿದು ಬಂದಿದೆ.
ನಾಯಿಗಳ ನಿಯಂತ್ರಣಕ್ಕಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ, ಆಂಟಿ ರಾಬಿಸ್ ಲಸಿಕೆ ಕೊಡಿಸಲು ಮಹಾನಗರ ಪಾಲಿಕೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪ್ರಾಣಿ ಯೋಗಕ್ಷೇಮ ನಿಗಮಕ್ಕೆ ಮನವಿ ಮಾಡಿದರೂ ಸಹ ಸ್ಪಂದನೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
ಆದರೆ ಮಹಾನಗರ ಪಾಲಿಕೆಯ ಮನವಿಗೆ ಸ್ವಯಂ ಸೇವಾ ಸಂಸ್ಥೆಗಳು ಸ್ಪಂದಿಸದಿರಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ. ಸಂತಾನ ಹರಣ ಶಸ್ತ್ರಚಿಕಿತ್ಸೆ, ಆಂಟಿ ರಾಬಿಸ್ ಲಸಿಕೆ ನೀಡಿದರೂ ಮಹಾನಗರ ಪಾಲಿಕೆಯಿಂದ ಸಕಾಲಕ್ಕೆ ಹಣ ಪಾವತಿಯಾಗುವುದಿಲ್ಲವೆಂಬ ಕಾರಣಕ್ಕೆ ಈ ಕಾರ್ಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
ಆದರೆ ಇದರ ನಡುವೆ ಹೈರಾಣಾಗುತ್ತಿರುವುದು ಮಾತ್ರ ಸಾರ್ವಜನಿಕರಾಗಿದ್ದು, ಬೆಂಗಳೂರು ನಗರದ ಕೆಲವೊಂದು ಪ್ರದೇಶಗಳಲ್ಲಿ ನಾಯಿಗಳ ಕಾಟದಿಂದ ರಾತ್ರಿ ಇರಲಿ ಹಗಲು ಹೊತ್ತಿನಲ್ಲೂ ಪ್ರವೇಶಿಸುವುದು ಕಷ್ಟಕರವಾಗಿದೆ. ಈಗಲಾದರೂ ಪಾಲಿಕೆ ಎಚ್ಚೆತ್ತು ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.