ಬೆಂಗಳೂರು: ಉದ್ಯಮಿಯೋರ್ವರಿಗೆ ಹನಿಟ್ರ್ಯಾಪ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನ ಯುವ ನಟನನ್ನು ಬೆಂಗಳೂರಿನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಜೆ.ಪಿ.ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಎಂದು ಗುರುತಿಸಲಾಗಿದೆ. ಈತ ಮಿಸ್ಟರ್ ಅಭಿರಾಮ್ ಎಂಬ ಸಿನಿಮಾದ ನಾಯಕ ನಟ ಎನ್ನಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ ಆರೋಪ ಯುವ ನಟನ ಮೇಲೆ ಬಂದಿದೆ. ಇಬ್ಬರು ಯುವತಿಯರ ಹೆಸರಲ್ಲಿ ಉದ್ಯಮಿಯೊಂದಿಗೆ ಚಾಟಿಂಗ್ ಮಾಡಿದ್ದ ಯುವ ಬಳಿಕ ಉದ್ಯಮಿಯನ್ನು ಭೇಟಿಯಾಗಿ ತಾನು ಕ್ರೈಂ ಬ್ರ್ಯಾಂಚ್ ಪೊಲೀಸ್, ಯುವತಿಯರಿಗೆ ಅಶ್ಲೀಲವಾಗಿ ಚಾಟ್ ಮಾಡಿದ ಬಗ್ಗೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಸ್ ಮುಚ್ಚಿಹಾಕಬೇಕು ಎಂದರೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ.
ಅದರಂತೆ ಆರಂಭದಲ್ಲಿ 50 ಸಾವಿರ ಹಣ ಪಡೆದಿದ್ದ ಯುವ, ಬಳಿಕ ಹಂತ ಹಂತವಾಗಿ 14 ಲಕ್ಷದವರೆಗೂ ಹಣ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ. ಅನುಮಾನಗೊಂಡ ಉದ್ಯಮಿ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ವಂಚನೆ ಮಾಡಿರುವುದು ಗೊತ್ತಾಗಿದ್ದು, ಇದೀಗ ಯುವ ನಟನನ್ನು ಬಂಧಿಸಿದ್ದಾರೆ.