ಮಾಂಸ ಭಕ್ಷಣೆ ಮಾಡುವ ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕಿನಿಂದಾಗಿ ಕೋಲ್ಕತ್ತಾದಲ್ಲಿ 44 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಶುಕ್ರವಾರ ತಡರಾತ್ರಿ RG ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.
ಈ ಮಾಂಸ ತಿನ್ನುವ ಬ್ಯಾಕ್ಟೀರಿಯಾವನ್ನು ವೈದ್ಯಕೀಯ ಪರಿಭಾಷೆಯಲ್ಲಿ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾವು ನಮ್ಮ ಚರ್ಮ ಮತ್ತು ಅದರ ಕೆಳಗಿನ ಅಂಗಾಂಶಗಳ ಅಪರೂಪದ ಸೋಂಕಿಗೆ ಕಾರಣವಾಗುತ್ತದೆ. ಕೂಡಲೇ ರೋಗ ನಿರ್ಣಯ ಮಾಡಿ ಚಿಕಿತ್ಸೆ ನೀಡದಿದ್ದರೆ, ಈ ಬ್ಯಾಕ್ಟೀರಿಯಾ ವ್ಯಕ್ತಿಯನ್ನು ವೇಗವಾಗಿ ಕೊಲ್ಲುತ್ತದೆ.
ಮೃತ ಮೃಣ್ಮೊಯ್ ರಾಯ್ ಕೆಲವು ದಿನಗಳ ಹಿಂದೆ ರೈಲಿನಿಂದ ಬಿದ್ದಿದ್ದರು. ಕಬ್ಬಿಣದ ರಾಡ್ ಸೊಂಟದ ಕೆಳಭಾಗಕ್ಕೆ ತಗುಲಿ ಗಾಯಗೊಂಡಿದ್ದರು. ಮಧ್ಯಮಗ್ರಾಮ್ ನಿವಾಸಿ ಮೃಣ್ಮೊಯ್ ಅವರ ಸ್ಥಿತಿ ದಿನೇ ದಿನೇ ಹದಗೆಡುತ್ತಲೇ ಬಂದಿತ್ತು. ಒಂದು ವಾರ ಅವರಿಗೆ ಸ್ಥಳೀಯ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಅಕ್ಟೋಬರ್ 23 ರಂದು RGKMCHನ ಟ್ರೊಮಾ ಸೆಂಟರ್‌ಗೆ ಸ್ಥಳಾಂತರಿಸಲಾಯಿತು.
ರೋಗಿಯು ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ತಕ್ಷಣ ಅವರನ್ನು ಶಸ್ತ್ರಚಿಕಿತ್ಸೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಯ್ತು. ವೆಂಟಿಲೇಶನ್‌ನಲ್ಲಿಟ್ಟು ತಡಮಾಡದೇ ಚಿಕಿತ್ಸೆಯನ್ನೂ ಪ್ರಾರಂಭಿಸಲಾಗಿತ್ತು. ಈ ವೇಳೆ ಅವರ ದೇಹದಲ್ಲಿ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಇರುವಿಕೆ ದೃಢಪಟ್ಟಿದೆ. ಸೋಂಕು ರೋಗಿಯ ಕೆಳಭಾಗದ ಅಂಗ ಮತ್ತು ಜನನಾಂಗದ ಪ್ರದೇಶವನ್ನು ತಿಂದು ಹಾಕಿತ್ತು.
ಮಾರಣಾಂತಿಕ ಬ್ಯಾಕ್ಟೀರಿಯಾಗಳು ಚರ್ಮದ ಮೂಲಕ ಮೃದು ಅಂಗಾಂಶಗಳನ್ನು ಪ್ರವೇಶಿಸಿದ್ದವು. ಪ್ರಬಲವಾದ ಆ್ಯಂಟಿಬಯೋಟಿಕ್‌ಗಳು ಮತ್ತು ಇತರ ಪೋಷಕ ಚಿಕಿತ್ಸೆಯನ್ನು ನೀಡಿದರೂ ಆತ ಬದುಕುಳಿಯಲಿಲ್ಲ. ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾ ಮೊದಲು ರಕ್ತನಾಳಗಳ ಮೇಲೆ ದಾಳಿ ಮಾಡುವುದರಿಂದ ಥ್ರಂಬೋಸಿಸ್ ಉಂಟಾಗುತ್ತದೆ. ಇದು ಅಂಗಾಂಶಗಳು, ತಂತುಕೋಶಗಳು ಮತ್ತು ಸ್ನಾಯುಗಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಅಂತಿಮವಾಗಿ ರಕ್ತ ಪೂರೈಕೆಯನ್ನು ಕಡಿತಗೊಳಿಸುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಮದ್ಯವ್ಯಸನಿಯಾಗಿದ್ದ ರಾಯ್‌ಗೆ ರೋಗನಿರೋಧಕ ಶಕ್ತಿ ಕಡಿಮೆಯಿತ್ತು ಎನ್ನಲಾಗ್ತಿದೆ. ಈ ಬ್ಯಾಕ್ಟೀರಿಯಾದ ಸೋಂಕು ಉರಿಯೂತವನ್ನು ಪ್ರಚೋದಿಸುತ್ತದೆ. ಜೊತೆಗೆ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುವ ರಕ್ತವನ್ನು ಪೂರೈಸುವ ಕ್ಯಾಪಿಲ್ಲರಿಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಜೀವಕೋಶದ ಸಾವು, ಅಂಗಾಂಶ ಹಾನಿ ಅಥವಾ ನೆಕ್ರೋಸಿಸ್ಗೆ ಕಾರಣವಾಗುತ್ತದೆ. ಇದು ಸ್ನಾಯುಗಳನ್ನೂ ಒಳಗೊಳ್ಳಬಹುದು ಅಂತಾ ವೈದ್ಯರು ತಿಳಿಸಿದ್ದಾರೆ. ಈ ಬ್ಯಾಕ್ಟೀರಿಯಾವು ಮಾಂಸದ ಮೂಲಕ ಆವರಿಸಿಕೊಳ್ಳುವುದರಿಂದ ಅವುಗಳನ್ನು ಕೆಲವೊಮ್ಮೆ ‘ಮಾಂಸ ತಿನ್ನುವ ಬ್ಯಾಕ್ಟೀರಿಯಾ’ ಎಂದು ಕರೆಯಲಾಗುತ್ತದೆ.