ಪಲಕ್ಕಾಡ್: ನಾಯಿ ಕಚ್ಚಿದಾಗಿನಿಂದ ರೇಬೀಸ್ ಕಾಯಿಲೆಗೆ ತುತ್ತಾಗಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಕೇರಳದ ಪಲಕ್ಕಾಡ್ ನಲ್ಲಿ ನಡೆದಿದೆ.
19 ವರ್ಷದ ಶ್ರೀಲಕ್ಷ್ಮಿ ಮೃತ ವಿದ್ಯಾರ್ಥಿನಿ. ಶ್ರೀಲಕ್ಷ್ಮಿ ಕಾಲೇಜಿಗೆ ಹೋಗುತ್ತಿದ್ದಾಗ ಮೇ 30ರಂದು ಅವರ ಪಕ್ಕದ ಮನೆಯ ನಾಯಿ ಕಚ್ಚಿದೆ. ಘಟನೆ ಬಳಿಕ ಶ್ರೀಲಕ್ಷ್ಮಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಳು.
ಆರೋಗ್ಯ ಇಲಾಖೆ ಸೂಚನೆಯಂತೆ ಲಸಿಕೆ ಹಾಕಿಸಿಕೊಂಡಿದ್ದಳು. ಬಳಿಕ ಗುಣಮುಖಳಾಗಿದ್ದ ಶ್ರೀಲಕ್ಷ್ಮಿಗೆ ಇತ್ತೀಚೆಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ರೇಬೀಸ್ ಗುಣಲಕ್ಷಣವಿರುವ ಬಗ್ಗೆ ತಿಳಿಸಿದ್ದರು. ವಿದ್ಯಾರ್ಥಿನಿಯನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಯುವತಿ ಮೃತಪಟ್ಟಿದ್ದಾಳೆ.