ಯುವತಿಯೊಬ್ಬಳಿಗೆ ಬಲವಂತವಾಗಿ ಚುಂಬಿಸಿದ್ದಕ್ಕೆ ಪುಣೆಯಲ್ಲಿ ಜೊಮೆಟೋ ಡೆಲಿವರಿ ಏಜೆಂಟ್ ಒಬ್ಬನನ್ನು ಬಂಧಿಸಲಾಗಿದೆ. 42 ವರ್ಷದ ಈ ವ್ಯಕ್ತಿ ಫುಡ್ ಡೆಲಿವರಿ ಮಾಡಲು ಬಂದಿದ್ದ. ಕುಡಿಯಲು ನೀರು ಕೇಳಿದ್ದಾನೆ, ಆಕೆ ನೀರು ಕೊಡಲು ಬಂದ ಸಂದರ್ಭದಲ್ಲಿ 19 ವರ್ಷದ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೆ, ಬಲವಂತವಾಗಿ ಚುಂಬಿಸಿದ್ದಾನೆ.
ಯೆವಲೇವಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ಯುವತಿ ಪುಣೆ ಪೊಲೀಸರಿಗೆ ದೂರು ನೀಡಿದ್ದಳು. ಯುವತಿ ನೀರು ತರುತ್ತಿದ್ದಂತೆ ಆತ ಕುಟುಂಬದವರ ಕುರಿತು ವಿಚಾರಿಸಿದ್ದ. ತಾನು ಇಬ್ಬರು ಸ್ನೇಹಿತೆಯರೊಂದಿಗೆ ಫ್ಲಾಟ್ನಲ್ಲಿ ವಾಸಿಸ್ತಿರೋದಾಗಿ ಯುವತಿ ಹೇಳಿದ್ದಾಳೆ. ಸ್ನೇಹಿತೆಯರು ಊರಿಗೆ ಹೋಗಿರೋದಾಗಿ ತಿಳಿಸಿದ್ದಾಳೆ.
ಯುವತಿ ಮನೆಯಲ್ಲಿ ಒಂಟಿಯಾಗಿರೋದು ಗೊತ್ತಾಗ್ತಿದ್ದಂತೆ ಆತ ಮತ್ತೊಂದು ಗ್ಲಾಸ್ ನೀರು ಬೇಕೆಂದು ಕೇಳಿದ್ದಾನೆ. ಆಕೆ ಮುಂದಕ್ಕೆ ತಿರುಗುತ್ತಿದ್ದಂತೆ ಅವಳನ್ನು ಬರಸೆಳೆದುಕೊಂಡು ಕೆನ್ನೆಗೆ ಎರಡು ಬಾರಿ ಮುತ್ತಿಕ್ಕಿದ್ದಾನೆ. ನಾನು ನಿನ್ನ ಅಂಕಲ್ ಇದ್ದಂತೆ, ಏನೇ ಸಹಾಯ ಬೇಕಿದ್ದರೂ ಕೇಳು ಎನ್ನುತ್ತ ಅಲ್ಲಿಂದ ಪರಾರಿಯಾಗಿದ್ದಾನೆ.
ಅಷ್ಟಕ್ಕೂ ಸುಮ್ಮನಾಗದ ಆ ಡೆಲಿವರಿ ಏಜೆಂಟ್ ಆಕೆಗೆ ವಾಟ್ಸಾಪ್ ಮೆಸೇಜ್ ಕಳಿಸಲಾರಂಭಿಸಿದ್ದ. ಮೊದಲು ದೂರು ದಾಖಲಿಸಲು ಹೆದರಿದ್ದ ಯುವತಿ, ಮೆಸೇಜ್ ಸಹ ಬರುತ್ತಿದ್ದಂತೆ ಕೇಸ್ ಹಾಕಿದ್ದಾಳೆ. ಪೊಲೀಸರು ಆತನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಸಹ ಮಾಡಿದ್ದಾರೆ.