ಬೆಳಗಾವಿ: ಒಂದುವರೆ ತಿಂಗಳ ಹಿಂದೆ ನಡೆದಿದ್ದ ಯುವಕನ ಅಸಹಜ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕಿದ್ದು, ತಂದೆಯೇ ಮಗನನ್ನು ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಹೊರವಲಯದ ಮಲಪ್ರಭಾ ನದಿತೀರದಲ್ಲಿ ಯುವಕನೊಬ್ಬನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಖಾನಾಪುರ ಪೊಲೀಸರಿಗೆ ತಂದೆಯೇ ಕೊಲೆಗಾರ ಎಂಬುದು ಗೊತ್ತಾಗಿದ್ದು, ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ನದಿ ತೀರದಲ್ಲಿ ಪತ್ತೆಯಾಗಿದ್ದ ಶವದ ತನಿಖೆ ನಡೆಸಿದ ಪೊಲೀಸರಿಗೆ ಅದು ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದ ನಿವಾಸಿ ನಿಖಿಲ ರಾಜಕುಮಾರ ಮಗದುಮ್ಮ (24) ಎಂಬ ಯುವಕ ಎಂಬುದು ಗೊತ್ತಾಗಿದೆ. ನಿಖಿಲ್ ಬಗ್ಗೆ ವಿಚಾರಿಸಿದಾಗ ಪೊಲೀಸರು ಆತನ ಚಿಕ್ಕಪ್ಪ ಸಂತೋಷ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ಅಣ್ಣ ರಾಜಕುಮಾರ ಶಂಕರ ಮಗದುಮ್ಮ ನಿಖಿಲ್ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ರಾಜಕುಮಾರನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ತನ್ನ ಹಿರಿಯ ಮಗ ನಿಖಿಲ ಮಾನಸಿಕ ಅಸ್ವಸ್ಥ. ಆತ ಬದುಕಿರುವವರೆಗೆ ಕಿರಿಯ ಮಗ ನಿತೀಶ್ ನಿಗೆ ಮದುವೆ ಮಾಡಲು ಸಾಧ್ಯವಿಲ್ಲ. ತೊಂದರೆ ಆಗುತ್ತದೆಂದು ಭಾವಿಸಿ ನಿಖಿಲನನ್ನು ಮಲಪ್ರಭಾ ನದಿಯ ಬಳಿ ಕರೆದುಕೊಂಡು ಹೋಗಿ ಆತನಿಗೆ ವಿಷ ಕುಡಿಸಿ, ಬಳಿಕ ಆತನ ತಲೆಯನ್ನು ಮರಕ್ಕೆ ಜಜ್ಜಿ ಸಾಯಿಸಿದ್ದಾಗಿ ತಿಳಿಸಿದ್ದಾನೆ. ಆರೋಪಿ ರಾಜಕುಮಾರನನ್ನು ಬಂಧಿಸಿ, ನ್ಯಾಯಾಂಗ ಬಧನಕ್ಕೆ ಒಪ್ಪಿಸಿದ್ದಾರೆ.