ಬೆಂಗಳೂರು: ಇದು ರಕ್ಷಕನಾಗಬೇಕಿದ್ದ ಆರಕ್ಷಕನೇ ಮೋಸ ಮಾಡಿ ಯುವತಿಗೆ ವಂಚಿಸಿದ ಕಥೆ. ಅನ್ಯಾಯವಾದರೆ ನ್ಯಾಯಕೊಡಬೇಕಾದ ಪೊಲೀಸರೇ ಇಂಥ ನೀಚ ಕೆಲಸಕ್ಕೆ ಇಳಿದರೆ ನ್ಯಾಯಕೊಡಿಸುವವರಾದರು ಯಾರು?
ಬೆಂಗಳೂರಿನ ಕದ್ರೇನಹಳ್ಳಿ ಬಳಿಯ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡ ಪೊಲೀಸ್ ಪೇದೆಯೊಬ್ಬ ಇದೀಗ ಬೇರೊಂದು ವಿವಾಹಕ್ಕೆ ಸಜ್ಜಾಗಿರುವ ಘಟನೆ ಬೆಳಕಿಗೆ ಬಂದಿದೆ.
ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ರವಿ ಎಂಬಾತ ಯುವತಿಗೆ ಮೋಸ ಮಾಡಿದ ಪೊಲೀಸ್ ಪೇದೆ. 2018ರಲ್ಲಿ ಫೇಸ್ ಬುಕ್ ಮೂಲಕ ಪರಿಚಯನಾದ ರವಿ, ಯುವತಿಯೊಂದಿಗೆ ಸ್ನೇಹ, ಪ್ರೀತಿ ಎಂದು ಸುತ್ತಾಡಿ ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಅಲ್ಲದೇ ದೈಹಿಕವಾಗಿಯೂ ಬಳಸಿಕೊಂಡಿದ್ದಾಗಿ ಯುವತಿ ಆರೋಪಿಸಿದ್ದಾಳೆ. ಇದೀಗ ತನ್ನನ್ನು ಬಿಟ್ಟು ಬೇರೆ ಯುವತಿ ಜತೆ ವಿವಾಹಕ್ಕೆ ಸಿದ್ದತೆ ನಡೆಸಿದ್ದಾನೆ. ನನಗೆ ನ್ಯಾಯ ಕೊಡಿಸಬೇಕು ಎಂದು ಯುವತಿ ಹಾಗೂ ಕುಟುಂಬದವರು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದಾರೆ.
ಆದರೆ ದೂರು ದಾಖಲಿಸಲು ಮಾತ್ರ ಯುವತಿ ಹಿಂದೇಟು ಹಾಕಿದ್ದು, ಆರೋಪಿತ ರವಿ ಕೂಡ ಮೌನವಾಗಿರುವುದು ಪೊಲೀಸ್ ಅಧಿಕಾರಿಗಳಿಗೆ ಅಚ್ಚರಿಯುಂಟುಮಾಡಿದೆ.