ನಾಗ್ಪುರ: ರಕ್ತ ವರ್ಗಾವಣೆಯ ನಂತರ ನಾಲ್ವರು ಮಕ್ಕಳು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್‌ಐವಿ) ಸೋಂಕಿಗೆ ಒಳಗಾಗಿದ್ದು, ಒಂದು ಮಗು ಮೃತಪಟ್ಟಿರುವ ಆಘಾತಕಾರಿ ಘಟನೆ ನಾಗ್ಪುರದಲ್ಲಿ ನಡೆದಿದೆ.
ಈ ನಾಲ್ವರು ರೋಗಿಗಳಿಗೆ ತಲಸ್ಸೆಮಿಯಾ ಚಿಕಿತ್ಸೆಗಾಗಿ ರಕ್ತವನ್ನು ನೀಡಲಾಗಿತ್ತು. ನಂತರ ಅವರು ಸೋಂಕಿತರು ಎಂದು ಕಂಡುಬಂದಿದೆ. ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡು ರಾಜ್ಯ ಆರೋಗ್ಯ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಪ್ರಕರಣ ಸಂಬಂಧ ಎಲ್ಲಾ ಮಾಹಿತಿ ಸಂಗ್ರಹಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಸಹಾಯಕ ಉಪನಿರ್ದೇಶಕ ಡಾ.ಆರ್.ಕೆ. ಧಾಕಾಟೆ ತಿಳಿಸಿದ್ದಾರೆ. ಆಹಾರ ಮತ್ತು ಔಷಧ ಇಲಾಖೆ (ಎಫ್‌ಡಿಎ) ಕೂಡ ಪ್ರಕರಣದ ಪ್ರಾಥಮಿಕ ತನಿಖೆ ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಚಿಕಿತ್ಸೆ ವೇಳೆ ಮಕ್ಕಳನ್ನು ಪರೀಕ್ಷೆಗೊಳಪಡಿಸಿದಾಗ ಎಚ್‌ಐವಿ ಸೋಂಕಿರುವುದು ಕಂಡುಬಂದಿದೆ. ಕಲುಷಿತ ರಕ್ತವನ್ನು ಬ್ಲಡ್ ಬ್ಯಾಂಕ್‌ನಿಂದ ನೀಡಿದ ನಂತರ ಅವರಿಗೆ ಎಚ್‌ಐವಿ ಮತ್ತು ಹೆಪಟೈಟಿಸ್ ಬಿ ಸೋಂಕು ತಗುಲಿದೆ ಎಂದು ಹೇಳಲಾಗಿದೆ.