ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳರ ಗ್ಯಾಂಗ್ ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಸಿಗಲಿಲ್ಲವೆಂದು ಗಂಡನ ಎದುರು ಪತ್ನಿಯನ್ನ ಗ್ಯಾಂಗ್ ರೇಪ್ ಮಾಡಿದೆ.
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿಯ ಎದುರೇ ನಾಲ್ವರು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ನಾಲ್ವರು ದರೋಡೆ ಮಾಡುವ ಉದ್ದೇಶದಿಂದ ದಂಪತಿಯ ಮನೆಗೆ ನುಗ್ಗಿದ್ದರು. ಶುಕ್ರವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಮುನ್ನ ದಂಪತಿಗಳು ಆಘಾತಕ್ಕೊಳಗಾಗಿದ್ದು, ಗುರುವಾರ ಮನೆಯೊಳಗೇ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ಕನೆಯವನನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯ ಪತಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ದಂಪತಿ ಮಲಗಲು ತಯಾರಿ ನಡೆಸುತ್ತಿದ್ದಾಗ ನಾಲ್ವರು ಮನೆಗೆ ನುಗ್ಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ವೇಳೆ ಮನೆಯೊಡೆಯನಿಂದ ಕಳ್ಳರು 1,400 ರೂ. ಕಿತ್ತುಕೊಂಡು ಹೆಚ್ಚಿನ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಒತ್ತಾಯಿಸಿದರು.
ಆದರೆ ಕೆಲವು ಬೆಳ್ಳಿ ಆಭರಣ ಹೊರತುಪಡಿಸಿ ದಂಪತಿಗಳ ಬಳಿ ಹೆಚ್ಚೇನೂ ಇರಲಿಲ್ಲ. ದರೋಡೆಕೋರರಿಗೆ ಬೇರೇನೂ ಸಿಗದಿದ್ದಾಗ ಅವರು ಮಹಿಳೆಯನ್ನು ಆಕೆಯ ಗಂಡನ ಮುಂದೆ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ವಿವಿಧ ಠಾಣೆಗಳ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಈ ಪೈಕಿ ಮೂವರನ್ನು ಶನಿವಾರ ಬಂಧಿಸಲಾಗಿದೆ. ನಮ್ಮ ತಂಡಗಳು ನಾಲ್ಕನೇ ಆರೋಪಿಯ ಬೆನ್ನತ್ತಿದ್ದು ಆತನನ್ನೂ ಹಿಡಿಯಲಾಗುವುದು ಎಂದರು.