ಬೆಳಗಾವಿ: ಆಸ್ತಿಗಾಗಿ ಅಣ್ಣ-ತಮ್ಮಂದಿರ ನಡುವಿನ ಜಗಳ ತಾರಕಕ್ಕೇರಿದ್ದು, ಸಹೋದರನನ್ನೇ ಹಿಗ್ಗಾಮುಗ್ಗಾ ಥಳಿಸಿ, ಕಟ್ಟಡದ ಮೇಲಿನಿಂದ ತಳ್ಳಿ ಹತ್ಯೆಗೆ ಯತ್ನಿಸಿರುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.
ಬಹುಮಹಡಿ ಕಟ್ಟಡಕ್ಕಾಗಿ ಶ್ರೀಧರ, ಸಂದೀಪ್ ಹಾಗೂ ಸುನೀಲ್ ಎಂಬ ಮೂವರು ಅಣ್ಣ-ತಮ್ಮಂದಿರ ನಡುವೆ ಜಗಳ ಆರಂಭವಾಗಿ ಹೊಡೆದಾಟವೇ ನಡೆದಿದೆ. ಓರ್ವ ಸಹೋದರನನ್ನು ಬಿಲ್ಡಿಂಗ್ ನ ಎರಡನೇ ಮಹಡಿಯಿಂದ ಕೆಳಗೆ ತಳ್ಳಲು ಇಬ್ಬರು ಸಹೋದರರು ಯತ್ನಿಸಿದ್ದಾರೆ. ಆತ ಕಟ್ಟಡದ ರಾಡ್ ಹಿಡಿದುಕೊಂಡು ಬಚಾವಾಗಲು ಯತ್ನಿಸಿದ್ದಾನೆ. ಆದರೆ ಆತನ ಕೈ ತಪ್ಪಿಸಲು ಸಹೋದರರು ಮನಸೋ ಇಚ್ಛೆ ಥಳಿಸಿ ತಳ್ಳಲು ಮುಂದಾಗಿದ್ದಾರೆ.
ಹೊಡೆದಾಟ ತಪ್ಪಿಸಲು ಬಂದ ತಂದೆಯ ಮೇಲೂ ಹಲ್ಲೆ ನಡೆಸಿರುವ ಸಹೋದರರು, ತಂದೆಯನ್ನೂ ನೂಕಿದ್ದಾರೆ. ಕಟ್ಟಡದಿಂದ ತಳ್ಳುತ್ತಿರುವ ಮಗನನ್ನು ರಕ್ಷಿಸುವಂತೆ ತಾಯಿ ಹಾಗೂ ಇನ್ನೋರ್ವ ಮಹಿಳೆ ಕೂಗಿಕೊಂಡಿದ್ದಾರೆ. ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ಹೊಡೆದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಖಡೇಬಜಾರ್ ಠಾಣೆ ಪೊಲೀಸರು ಮೂವರು ಸಹೋದರರನ್ನು ಬಂಧಿಸಿದ್ದಾರೆ.