ಬೆಂಗಳೂರು: ಭಾರತದಲ್ಲಿ ಮೊದಲ ಒಮಿಕ್ರಾನ್ ಕೇಸ್ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಅದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಇಬ್ಬರಲ್ಲಿ ಹೊಸ ರೂಪಾಂತರಿ ತಳಿ ದೃಢಪಟ್ಟಿರುವುದು ಸಿಲಿಕಾನ್ ಸಿಟಿ ಜನರನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ.
ರಾಜಧಾನಿ ಬೆಂಗಳೂರಿನ ಮೂಲಕವೇ ದೇಶಕ್ಕೆ ಒಮಿಕ್ರಾನ್ ಎಂಟ್ರಿಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದ ಇಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. 66 ವರ್ಷದ ವೃದ್ಧ ಹಾಗೂ 46 ವರ್ಷದ ಓರ್ವರಲ್ಲಿ ಸೋಂಕು ದೃಢಪಟ್ಟಿದೆ. ಸೂಕ್ತ ಸಮಯದಲ್ಲಿ ಸೋಂಕಿತರ ಟ್ರ್ಯಾಕ್ ಮಾಡಿದ್ದು, ಪ್ರಸ್ತುತ ಇಬ್ಬರ ಆರೋಗ್ಯವು ಸ್ಥಿರವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಒಮಿಕ್ರಾನ್ ಸೋಂಕಿತರ ಇಬ್ಬರ ಪೈಕಿ ಓರ್ವರ ಟ್ರಾವಲ್ ಹಿಸ್ಟ್ರಿ ಲಭ್ಯವಾಗಿದ್ದು, ನ.20ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮನಾ ನಿಲ್ದಾಣಕ್ಕೆ ಆಗಮಿದ್ದ ದಕ್ಷಿಣ ಆಫ್ರಿಕಾ ವ್ಯಕ್ತಿ ನ.23ರಂದು ಕೋವಿಡ್ ಟೆಸ್ಟ್ ಗೆ ಒಳಪಟ್ಟಿದ್ದರು. ಈ ವೇಳೆ ರಿಪೋರ್ಟ್ ಪಾಸಿಟಿವ್ ಬಂದಿದೆ. ಬಳಿಕ ಮೂರು ದಿನ ಕ್ವಾರಂಟೈನ್ ಆಗಿದ್ದರು. ಮೂರನೇ ದಿನದ ಬಳಿಕ ಮತ್ತೆ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿತ್ತು. ಈ ಹಿನ್ನಲೆಯಲ್ಲಿ ವ್ಯಕ್ತಿ ಆಫೀಸ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಟೆಸ್ಟ್ ವರದಿ ಬಗ್ಗೆ ಅನುಮಾನಗೊಂಡು ಮತ್ತೊಮ್ಮೆ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.