ಬೆಂಗಳೂರು: ಶಾಲಾ ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಇಡೀ ದಿನ ಬಿಸಿಲಿನಲ್ಲಿ ಶಾಲಾ ಸಿಬ್ಬಂದಿ ನಿಲ್ಲಿಸಿದ್ದು, ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ.
ನಗರದಲ್ಲಿನ ಕಮಲಾ ನಗರದ ಅಮರವಾಣಿ ಶಾಲೆಯಲ್ಲಿಯೇ ಈ ಘಟನೆ ನಡೆದಿದ್ದು, ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯ 10 ಸಾವಿರ ಶುಲ್ಕವನ್ನು ಬಾಕಿ ಇಟ್ಟುಕೊಂಡಿದ್ದಾರೆಂದು ಆಡಳಿತ ಮಂಡಳಿ, ಹಲವು ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರಗೆ ಹಾಕಿ ಇಡೀ ದಿನ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಜ್ವರ, ತಲೆನೋವು ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.
ಕೊರೊನಾದಿಂದಾಗಿ ಸರಿಯಾಗಿ ಕೆಲಸ ಇಲ್ಲದ ಕಾರಣ ಈ ವರ್ಷ ಫೀಸ್ ಕಟ್ಟುವಲ್ಲಿ ವಿಳಂಬವಾಗಿತ್ತು. ಕಳೆದ ವರ್ಷ ಸಂಪೂರ್ಣವಾಗಿಯೇ ಫೀಸ್ ಕಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಕಟ್ಟುತ್ತೇವೆ ಎಂದರೂ ವಿದ್ಯಾರ್ಥಿಗಳೊಂದಿಗೆ ಶಾಲಾ ಆಡಳಿತ ಮಂಡಳಿ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನಂತರ ಪಾಲಕರನ್ನು ಶಾಲೆಯ ಕೆಲವು ಸಿಬ್ಬಂದಿ ಸಮಾಧಾನ ಪಡಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.