ಬೆಂಗಳೂರು: ಮದುವೆಯಾದ ಎರಡೇ ತಿಂಗಳಿಗೆ ಪತಿ ಮಹಾಶಯ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿಯೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತ್ಯಾಮಗೊಂಡ್ಲುವಿನಲ್ಲಿ ನಡೆದಿದೆ.
20 ವರ್ಷದ ಪೂರ್ಣಿಮಾ ಹಾಗೂ 24 ವರ್ಷದ ಪ್ರದೀಪ್ ಪರಸ್ಪರ ಪ್ರೀತಿಸಿ, ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು. ಪೂರ್ಣಿಮಾಳೆ ಬೇಕು ಎಂದು ಹಠ ಹಿಡಿದು ಆಕೆಯ ಮನೆಯವರನ್ನು ಒಪ್ಪಿಸಿ ವಿವಾಹವಾಗಿದ್ದ. ಹಣ, ಚಿನ್ನಾಭರಣಗಳನ್ನು ಕೊಟ್ಟು ಅದ್ದೂರಿಯಾಗಿ ವಿವಾಹವನ್ನು ಮಾಡಿಕೊಟ್ಟಿದ್ದರು. ಆದರೆ ಈಗ ಮದುವೆಯಾದ ಎರಡೇ ತಿಂಗಳಿಗೆ ಪತ್ನಿಯನ್ನು ಬಿಟ್ಟು ಪತಿ ಪ್ರದೀಪ್ ನಾಪತ್ತೆಯಾಗಿದ್ದಾನೆ.
ಅಲ್ಲದೇ ಪ್ರದೀಪ್ ಬೇರೊಂದು ಯುವತಿಯನ್ನು ವಿವಾಹವಾಗಿದ್ದಾನೆ ಎಂಬ ಮಾತು ಕೇಳಿಬಂದಿದೆ. ಪ್ರದೀಪ್ ಮನೆ ಮುಂದೆ ನ್ಯಾಯಕ್ಕಾಗಿ ಪೂರ್ಣಿಮಾ ಪ್ರತಿಭಟನೆ ನಡೆಸಿದ್ದಾಳೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.