ಬೀದರ್: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚುತ್ತಿದ್ದು, ಮಕ್ಕಳು ಬಲಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೀದಿ ನಾಯಿ ದಾಳಿಗೆ ಬಾಲಕನೊಬ್ಬ ಬಲಿಯಾದ ಘಟನೆ ಮಾಸುವ ಮುನ್ನವೇ ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.
ಹುಚ್ಚುನಾಯಿಯೊಂದು 2 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದು, ಮುಖವನ್ನೇ ಕಚ್ಚಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗಾಡವಾನ್ ಗಲ್ಲಿಯಲ್ಲಿ ನಡೆದಿದೆ.
2 ವರ್ಷದ ಅಸ್ಮಾ ಸಮೀರ್ ಶೇಖ್ ಗಂಭೀರವಾಗಿ ಗಾಯಗೊಂಡಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಮಗುವಿಗೆ 32 ಹೊಲಿಗೆ ಹಾಕಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.