ಅಥಣಿ: ತವರಿನಿಂದ ವಾಪಸ್ ಬರಲು ನಿರಾಕರಿಸಿದ ಪತ್ನಿಯ ಮೇಲೆ ಪತಿಮಹಾಶಯನೊಬ್ಬ ಗುಂಡಿನ ದಾಳಿ ನಡೆಸಿ ಬೆದರಿಕೆ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಸಿಂಧಗಿಯ ಶಿವಾನಂದ ಎಂಬಾತ ತನ್ನ ಪತ್ನಿ ಪ್ರೀತಿ ಎಂಬುವವರ ಮೇಲೆ ಗುಂಡು ಹಾರಿಸಿ ಬೆದರಿಸಿದ್ದು, ಆರೋಪಿ ಪತಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.
4 ವರ್ಷಗಳ ಹಿಂದೆ ಶಿವಾನಂದ್ ಪ್ರೀತಿಯನ್ನು ವಿವಾಹವಾಗಿದ್ದ. ಕೆಲ ಕಾಲ ಚೆನ್ನಾಗಿಯೇ ಪತ್ನಿಯನ್ನು ನೋಡಿಕೊಳ್ಳುತ್ತಿದ್ದ ಆದರೆ ಬರ ಬರುತ್ತಾ ಪತ್ನಿಯನ್ನು ಬಿಟ್ಟು ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಬುದ್ಧಿವಾದಕ್ಕೂ ಕೇಳದ ಪತಿಯ ವರ್ತನೆಗೆ ಬೇಸತ್ತ ಪತ್ನಿ ಪ್ರೀತಿ ಅಥಣಿಯ ತವರು ಮನೆಗೆ ವಾಪಸ್ ಆಗಿದ್ದಳು. ಪತ್ನಿ ತವರು ಮನೆಗೆ ಬಂದು ಗಲಾಟೆ ಮಾಡಿದ ಪತಿ ಶಿವಾನಂದ ವಾಪಸ್ ತನ್ನ ಜೊತೆ ಬಾರದಿದ್ದರೆ ಗುಂಡಿಟ್ಟು ಕೊಲ್ಲುವುದಾಗಿ ಹೇಳಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಪ್ರೀತಿ ಪ್ರಾಣಾಪಾಯದಿಂದ ಕ್ಷಣಾರ್ಧದಲ್ಲಿ ಪಾರಾಗಿದ್ದಾಳೆ.
ಪತಿ ವಿರುದ್ಧ ಪ್ರೀತಿ ಅಥಣಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಆರೋಪಿ ಪತಿಮಹಾಶಯನನ್ನು ಪೊಲೀಸರು ಬಂಧಿಸಿ, ಗನ್ ವಶಕ್ಕೆ ಪಡೆದಿದ್ದಾರೆ.