ಬೆಂಗಳೂರು: ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಸ್ಮಗ್ಲಿಂಗ್ ಮಾಡಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ. ರಕ್ತಚಂದನ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಗಳ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆಂಧ್ರದಿಂದ ಅಕ್ರಮವಾಗಿ ರಕ್ತಚಂದನ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳ ಮೇಲೆ ಡಿಸೆಂಬರ್ 15ರಂದು ದಾಳಿ ನಡೆಸಿದ್ದ ಪೊಲೀಸರು, ಆರೋಪಿಗಳಿಂದ 13 ಲಕ್ಷ ಮೌಲ್ಯದ 21 ರಕ್ತಚಂದನ ತುಂಡು ಸಮೇತ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದರು. ರಕ್ತಚಂದನ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸದೇ ಬಿಟ್ಟು ಕಳುಹಿಸಿದ್ದರಲ್ಲದೇ ಬಳಿಕ ಇಬ್ಬರೂ ಪೊಲೀಸರು ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಮಾರಾಟ ಮಾಡಿದ್ದರು. ಈ ಕುರಿತು ಹೊಸಕೋಟೆ ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಮೋಹನ್ ಹಾಗೂ ಮಹದೇವಪುರ ಠಾಣೆಯ ಹೆಚ್ ಸಿ ಮಮ್ತೇಶ್ ಗೌಡ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.