ಕೋಲಾರ: ಕೋಲಾರ ಜಿಲ್ಲಾಧಿಕಾರಿ ಸಹಿ ನಕಲು ಮಾಡಿ 3.27 ಎಕರೆ ಭೂಮಿ ಮಂಜೂರಿಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಕೋಲಾರ ತಾಲೂಕಿನ ಆಲಹಳ್ಳಿಯಲ್ಲಿರುವ ಭೂಮಿಗೆ ಸಂಬಂಧಪಟ್ಟ ದಾಖಲೆಗಳಿಗೆ ಡಿಸಿ ವೆಂಕಟ್ ರಾಜಾ ಅವರ ಸಹಿ ನಕಲು ಮಾಡಿ ಮಂಜೂರು ಮಾಡಿಕೊಳ್ಳಲು ಯತ್ನಿಸಲಾಗಿದ್ದು, ದಾಖಲೆ ಪತ್ರ ತಹಶೀಲ್ದಾರ್ ಗೆ ಸಲ್ಲಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
3.27 ಎಕರೆ ಭೂಮಿ ಮಂಜೂರಾತಿಯನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದರು. ಆದರೆ ಆದೇಶ ಪ್ರತಿ ಪುರಸ್ಕರಿಸಲಾಗಿದೆ ಎಂದು ನಕಲು ಸಹಿ ಮಾಡಿ ವರದಿಯನ್ನು ತಹಶೀಲ್ದಾರ್ ಗೆ ಕಳುಹಿಸಲಾಗಿದೆ. ಸುಮಾರು 3 ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಕಟ್ಟೆಯನ್ನು ಸರ್ಕಾರಿ ಖರಾಬು ಜಾಗ ಎಂದು ತಿದ್ದುಪಡಿ ಮಾಡಿ ಸನ್ ಲಾಡ್ಜ್ ಪ್ರಾಪರ್ಟಿ ಎಂಬ ಕಂಪನಿ ಹೆಸರಿಗೆ ನಕಲಿ ಮಂಜೂರು ಮಾಡಲಾಗಿತ್ತು.
ಈ ಕುಕೃತ್ಯದಲ್ಲಿ ತಾಲೂಕು ಕಚೇರಿ ಸಿಬ್ಬಂದಿಯೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.