ಬೆಂಗಳೂರು: ಚಾಕು ತೋರಿಸಿ ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಶಾಂತಲಾನಗರದಲ್ಲಿ ನಡೆದಿದೆ.
ಅಶೋಕನಗರದ ಠಾಣಾ ವ್ಯಾಪ್ತಿಯಲ್ಲಿ ಸೆ.10ರಂದು ರಾತ್ರಿ 9;30ರ ಸುಮಾರಿಗೆ ನಡೆದಿದ್ದ ಘಟನೆ ಬಗ್ಗೆ ಮಹಿಳೆ ಇಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂದು ಏರಿಯಾದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆಗೆ ಎಂದು ಜನರು ಹೋಗಿದ್ದರು. ಈ ವೇಳೆ ಆರ್ಚ್ ಲೈಟ್ ಸ್ವಿಚ್ ಆಫ್ ಮಾಡಲು ಮಹಿಳೆ ತೆರಳಿದ್ದಾಗ ಹಿಂದಿನಿಂದ ಬಂದ ವೀಲಿಯಮ್ ಪ್ರಕಾಶ್ ಎಂಬಾತ ಚಾಕು ತೋರಿಸಿ ಬೆದರಿಕೆಯೊಡ್ಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಮಹಿಳೆ ಆರೋಪಿ ವೀಲಿಯಮ್ ಪ್ರಕಾಶ್ ನನ್ನು ತಳ್ಳಿ ಓಡಿಬಂದು ತಪ್ಪಿಸಿಕೊಂಡಿದ್ದಾಳೆ. ಆರೋಪಿ ಜೀವ ಬೆದರಿಕೆ ಹಾಕಿದ್ದರಿಂದ ಇಷ್ಟು ದಿನ ಮಹಿಳೆ ದೂರು ದಾಖಲಿಸದೇ ಸುಮ್ಮನಿದ್ದರು. ಈಗ ಸಾಮಾಜಿಕ ಕಾರ್ಯಕರ್ತರ ಸಹಾಯದಿಂದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.