ಬೆಂಗಳೂರು: ಪ್ರತಿಬಾರಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುವ ಬೆಂಗಳೂರು ವಿಶ್ವವಿದ್ಯಾಲಯ ಇದೀಗ ಮತ್ತೊಂದು ಎಡವಟ್ಟು ಮಾಡಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಕ್ಕಿಂತ ಹೆಚ್ಚು ಮಾರ್ಕ್ಸ್ ನೀಡುವ ಮೂಲಕ ತನ್ನ ಬೇಜವಾಬ್ದಾರಿ ವರ್ತನೆ ಮುಂದುವರೆಸಿದೆ.
70 ಅಂಕದ ಪರೀಕ್ಷೆಗೆ 73 ಅಂಕ ನೀಡುವ ಮೂಲಕ ವಿಶ್ವವಿದ್ಯಾಲಯದ ಎಡವಟ್ಟು ಚರ್ಚೆಗೆ ಗ್ರಾಸವಾಗಿದೆ. ಬಿಕಾಂ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಟ್ರಾವೆಲ್ ಏಜೆನ್ಸಿ ಆಂಡ್ ಟೂರ್ ಆಪರೇಟರ್ ವಿಷಯದಲ್ಲಿ ಇಂತಹ ಬೇಜವಾಬ್ದಾರಿ ಮೆರೆದಿರುವುದು ಬೆಳಕಿಗೆ ಬಂದಿದೆ.
ಡಿಸೆಂಬರ್ ನಲ್ಲಿ ಪರೀಕ್ಷೆ ನಡೆದಿದ್ದು, 70 ಅಂಕದ ಥಿಯರಿ ಹಾಗೂ 30 ಅಂಕದ ಇಂಟರ್ನಲ್ ಸೇರಿ ಒಟ್ಟು 100 ಅಂಕ ನಿಗದಿಯಾಗಿತ್ತು. ಆದರೆ ಥಿಯರಿಯಲ್ಲಿ 70 ಅಂಕಕ್ಕೆ 73 ಅಂಕ ನೀಡಲಾಗಿದೆ. ಮಾರ್ಕ್ಸ್ ನೋಡಿ ವಿದ್ಯಾರ್ಥಿಗಳು ತಬ್ಬಿಬ್ಬಾಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಹಲವು ಕಾಲೇಜುಗಳಲ್ಲಿ ಇದೇ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ.