ಹಾಸನ: ಜೀವನಾಂಶ ಕೇಳಿದ್ದ ಪತ್ನಿಯನ್ನು ಪತಿ ಮಹಾಶಯನೇ ಕೋರ್ಟ್ ಆವರಣದಲ್ಲಿ ಕೊಲೆ ಮಾಡಲು ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ 2ನೇ ಜೆ ಎಂಎಫ್ ಸಿ ನ್ಯಾಯಾಲಯದಲ್ಲಿ ನಡೆದಿದೆ.
ತಟ್ಟೆಕೆರೆ ಗ್ರಾಮದ ಚೈತ್ರಾ ಹಾಗೂ ಶಿವಕುಮಾರ್ ದಂಪತಿ ಕೌಟುಂಬಿಕ ಕಲಹದಿಂದ ಕೋರ್ಟ್ ಮೆಟ್ಟಿಲೇರಿದ್ದರು. ಎರಡು ವರ್ಷಗಳ ಹಿಂದೆಯೇ ಚೈತ್ರಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಜೀವನಾಂಶ ಕೇಳಿದ್ದರು. ಇಂದು ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿತ್ತು.
ವಿಚಾರಣೆಗೆ ಕೋರ್ಟ್ ಗೆ ಹಾಜರಾಗಿದ್ದ ಚೈತ್ರಾ ಮೇಲೆ ಪತಿ ಶಿವಕುಮಾರ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಕುತ್ತಿಗೆಗೆ ಇರಿದು, ಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಚೈತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋರ್ಟ್ ಆವರಣದಲ್ಲಿಯೇ ನಡೆದ ಈ ಕೃತ್ಯ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.