ದಕ್ಷಿಣ ಕನ್ನಡ: ನ್ಯಾಯ ಕೇಳಲು ಹೋದ ಅತ್ಯಾಚಾರ ಸಂತ್ರಸ್ತೆ ಮೇಲೆಯೇ ಆರಕ್ಷಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ತನ್ನ ಮಗಳ ಮೇಲೆ ಪೊಲೀಸ್ ಪೇದೆ ಅತ್ಯಾಚಾರ ನಡೆಸಿ, ಗರ್ಭವತಿಯನ್ನಾಗಿ ಮಾಡಿದ್ದು ಗರ್ಭಪಾತ ಮಾಡಿಸಿಕೊಳ್ಳುವಂತೆ ಬೆದರಿಕೆಯೊಡ್ಡುತ್ತಿರುವುದಾಗಿ ಸಂತ್ರಸ್ತೆ ತಂದೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ತನ್ನ ಮಗಳ ಮೇಲೆ ಕಡಬ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಶಿವರಾಜ್ ಅತ್ಯಾಚಾರ ನಡೆಸಿದ್ದು, ಮಗಳು ಗರ್ಭವತಿಯಾಗುತ್ತಿದ್ದಂತೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಹೇಳುತ್ತಿದ್ದಾನೆ. ಅಲ್ಲದೇ ತನ್ನ ಮಗಳನ್ನು ಹಾಗೂ ಪತ್ನಿಯನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಇಟ್ಟಿರುವುದಾಗಿ ಸಂತ್ರಸ್ತೆಯ ತಂದೆ ಆರೋಪಿಸಿ ದೂರು ನೀಡಿದ್ದಾರೆ.
2 ವರ್ಷಗಳ ಹಿಂದೆ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಕುರಿತು ಅದೇ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ ಬಾಲಕಿ ಮನೆಗೆ ಸಮನ್ಸ್ ಕೊಡುವ ನೆಪದಲ್ಲಿ ಪೊಲೀಸ್ ಪೇದೆ ಶಿವರಾಜ್ ಬರುತ್ತಿದ್ದ. ಹೀಗೆ ಪರಿಚಿತನಾಗಿದ್ದ ಶಿವರಾಜ್ ಸಂತ್ರಸ್ತೆ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಮಗಳು ಗರ್ಭವತಿಯಾಗುತ್ತಿದ್ದಂತೆ ಗರ್ಭಪಾತಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ದೂರಿದ್ದಾರೆ.