ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಗೆ ಕನ್ನಡಿ ಹಿಡಿಯುವಂಥ ಘಟನೆಯೊಂದು ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಯ ಗೈರು ಹಾಜರಿಯಲ್ಲೇ ಮಹಿಳೆಗೆ ಹೆರಿಗೆಯಾಗಿದ್ದು, ಶಿಶು ಸಾವನ್ನಪ್ಪಿದೆ.
ತುಂಬು ಗರ್ಭಿಣಿಯಾಗಿದ್ದ ಮಹಿಳೆಗೆ ಹೆರಿಗೆ ನೋವು ಶುರುವಾಗಿತ್ತು. ಬಡ ತಂದೆಯ ಬಳಿ ಆಂಬ್ಯುಲೆನ್ಸ್‌ಗೆ ಕೊಡಲು ಹಣವಿರಲಿಲ್ಲ. ಕೂಡಲೇ ಆತ ಆಟೋದಲ್ಲಿ ಮಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾನೆ. ಆ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಯೇ ಇರಲಿಲ್ಲ.
ಪರಿಣಾಮ ಮಹಿಳೆಗೆ ವರಾಂಡಾದಲ್ಲೇ ಹೆರಿಗೆಯಾಗಿದೆ. ಕೆಲವೇ ಕ್ಷಣಗಳಲ್ಲಿ ಮಗು ಸಾವನ್ನಪ್ಪಿದೆ. ವೈದ್ಯರು ಇಲ್ಲದೇ ಇದ್ದಿದ್ದರಿಂದ್ಲೇ ಮಗುವನ್ನು ಕಳೆದುಕೊಳ್ಳಬೇಕಾಯಿತೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದ್ರೆ ಗರ್ಭಿಣಿಯನ್ನು ಸೂಕ್ತ ಸಮಯಕ್ಕೆ ಕರೆತರದೇ ಇದ್ದಿದ್ದರಿಂದ ಸಮಸ್ಯೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ಪ್ರಹ್ಲಾದ್ ಚೌಹಾಣ್ ಕೂಡ ವೈದ್ಯರು ಹಾಗೂ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.