ಬೆಂಗಳೂರು: ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಪೋಷಕರು ಬೈದರು ಎಂಬ ಕಾರಣಕ್ಕೆ ಯುವಕನೊಬ್ಬ ಮನೆ ಬಿಟ್ಟು ಹೋಗಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಲ್ಡರ್ ಮಂಜುನಾಥ್ ಎಂಬುವವರ ಪುತ್ರ ವಿಶಾಲ್ ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾನೆ. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ತಂದೆ-ತಾಯಿ ಮಗನಿಗೆ ಬುದ್ಧಿವಾದ ಹೇಳಿ, ಬೈದಿದ್ದಾರೆ. ಇದೇ ಕಾರಣಕ್ಕೆ ಬೇಸರಗೊಂಡ ಪುತ್ರ ವಿಶಾಲ್, ತನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾನೆ.
5000 ರೂಪಾಯಿ ಹಣದೊಂದಿಗೆ ಹೋಂಡಾ ಆಕ್ಟಿವ್ ಬೈಕ್ ನೊಂದಿಗೆ ಮನೆ ಬಿಟ್ಟು ಹೋದ ಮಗ ಇನ್ನೂ ವಾಪಸ್ ಆಗಿಲ್ಲ. ಆತ ಮನೆಯಿಂದ ಹೋಗುತ್ತಿರುವ ದೃಶ್ಯ ಅಪಾರ್ಟ್ ಮೆಂಟ್ ನಿವಾಸದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗನಿಗಾಗಿ ಹುಡುಕಾಟ ನಡೆಸಿರುವ ಪೋಷಕರು ಇದೀಗ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.